ತುಮಕೂರು: ತುಮಕೂರು ಜಿಲ್ಲೆಗೆ ಸರಬರಾಜು ಆಗುವ ಹೇಮಾವತಿ ನದಿ ನೀರನ್ನು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದ್ದು ಇದನ್ನು ವಿರೋಧಿಸಿ, ಎಲ್ಲಿಂದ ಯೋಜನೆ ಕಾಮಗಾರಿ ಪ್ರಾರಂಭವಾಗುತ್ತೊ ಅಲ್ಲಿಂದ ಪಾದಯಾತ್ರೆ ಶುರುಮಾಡಿದ್ದೇವೆ ಎಂದು ಜೆಡಿಎಸ್ ವಿರೋಧ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ತಿಳಿಸಿದ್ದಾರೆ.
ಯೋಜನೆ ವಿರೋಧಿಸಿ ಆರಂಭವಾಗಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇದು ನಮ್ಮಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆ. ಗುಬ್ಬಿ ತುಮಕೂರು ಸೇರಿದಂತೆ ಎಲ್ಲಾ ತಾಲ್ಲೂಕುಗಳಿಗೂ ತೊಂದರೆಯಾಗಲಿದೆ. ಈ ಯೋಜನೆ ನಿಲ್ಲಿಸ ಬೇಕು ಎಂದು ಡಿ.ಕೆ.ಶಿವಕುಮಾರ್ ಅವರನ್ನ ಹಲವು ಭಾರಿ ಭೇಟಿಯಾಗಿದ್ದೇವೆ. ಅವರ ಧೋರಣೆ ಏನು ಎಂಬುದು ಗೊತ್ತಾಗಿದೆ ಎಂದರು.
ನೀವು ಏನೇಮಾಡಿದ್ರೂ ನೀರು ತೆಗೆದುಕೊಂಡು ಹೋಗ್ತಿವಿ ಅನ್ನೋದು ಅವರ ಧೋರಣೆ. ನೀರನ್ನ ಅದ್ಹೇಗೆ ತೆಗೆದುಕೊಂಡು ಹೋಗ್ತಿರಾ…ನೋಡೆ ಬಿಡೋಣ… ತುಮಕೂರು ಜಿಲ್ಲೆಯವರು ಏನು ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರು ಏಳು ಜನ ಕಾಂಗ್ರೆಸ್ ಶಾಸಕರಿದ್ದಾರೆ. ನಿಮಗೇನಾದ್ರು ಕಾಳಜಿ ಇದ್ರೆ ಕೂಡಲೇ ಈ ಯೋಜನೆಯನ್ನ ನಿಲ್ಲಿಸಬೇಕು. ಹಿಂದೆ ಒಂದು ಸಲ ಜಿಪಂ ಕೆಡಿಪಿ ಸಭೆಯಲ್ಲಿ ಕೆನಾಲ್ ವಿರುದ್ದ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರೆಜುಲ್ಯೂಷನ್ ಪಾಸ್ ಮಾಡಿದ್ದೇವೆ ಎಂದರು.
ಹಾಗಾಗಿ ಈ ಯೋಜನೆಯನ್ನ ಹಿಂಪಡೆಯುವಂತೆ ಪರಮೇಶ್ವರ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಕುಣಿಗಲ್ ಗಡಿ ದಾಟಿದ ಮೇಲೆ ನಿಮಗೆ ಹೇಗೆ ಬೇಕೋ ಹಾಗೆ ಮಾಡಿ ಎಂದರು. ನಮ್ಮ ಜಿಲ್ಲೆಯಿಂದ ಲಿಂಕ್ ಕೆನಾಲ್ ಬೇಡ..ಬೇರೆ ಯಾವುದೇ ಮಾರ್ಗದಲ್ಲಿ ಮಾಡಿಕೊಳ್ಳಿ ಎಂದರು.
ಇಂದಿನಿಂದ ಎರಡು ದಿನಗಳ ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ಬೃಹತ್ ಪಾದಯಾತ್ರೆ ನಡೆಯಲಿದೆ. ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿಯ ಹೇಮಾವತಿ ನಾಲೆ ಗೇಟ್ ನಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪಾದಯಾತ್ರೆ ಆರಂಭವಾಗಿದೆ.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಗೆ ಕೈ ಜೋಡಿಸಿದ ಎನ್ ಡಿಎ ಪಕ್ಷಾತೀತವಾಗಿ ಕೈ ಜೋಡಿಸಿದ ರೈತ ಪರ ಸಂಘಟನೆಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು, ನಮ್ಮ ನೀರು ನಮ್ಮ ಹಕ್ಕು ಎಂದು ಘೋಷ ವಾಕ್ಯದೊಂದಿಗೆ ಪಾದಯಾತ್ರೆ ಆರಂಭಿಸಿವೆ.
ಇಂದು ಗುಬ್ಬಿ ತಾಲೂಕಿನ ಸಾಗರನಹಳ್ಳಿ ಹೇಮಾವತಿ ನಾಲೆ ಗೇಟ್ ನಿಂದ ಆರಂಭವಾಗಿ, ಗುಬ್ಬಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಸಿವೆ. ಬಳಿಕ ಕಳ್ಳಿಪಾಳ್ಯ ಗೇಟ್ ಬಳಿಯಿರುವ ಓಂ ಪ್ಯಾಲೇಸ್ ಭವನದಲ್ಲಿ ರಾತ್ರಿ ವಾಸ್ತವ್ಯ ಹೂಡಲಾಗುತ್ತಿದೆ.
ಬಳಿಕ ನಾಳೆ ಕಳ್ಳಿಪಾಳ್ಯ ಗೇಟ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ, ಸೋಮವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿವೆ.
ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕೈಬಿಡಬೇಕೆಂದು ಹೋರಾಟ ಆರಂಭವಾಗಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಶಾಸಕ ಸುರೇಶ್ ಗೌಡ, ಜಿ.ಬಿ ಜ್ಯೋತಿ ಗಣೇಶ್, ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ, ಸುರೇಶ್ ಬಾಬು,ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಬೃಹತ್ ಪಾದಯಾತ್ರೆಯಲ್ಲಿ ಜಿಲ್ಲೆಯ ಸಾವಿರಾರು ಜನ ಭಾಗಿಯಾಗಿದ್ದಾರೆ.
ತುಮಕೂರಿನ ಗುಬ್ಬಿ ತಾಲೂಕಿನ ಡಿ ರಾಂಪುರದಿಂದ ಕುಣಿಗಲ್ ಮಾರ್ಗವಾಗಿ, ಮಾಗಡಿಗೆ ಹೇಮಾವತಿ ನೀರು ಕೊಂಡೋಯ್ಯುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಇದಾಗಿದೆ. ಸುಮಾರು 1 ಸಾವಿರ ಕೋಟಿ ವೆಚ್ಚದ ಕಾಮಗಾರಿ ಯೋಜನೆಯು ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆಯಾಗಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx