ಬೆಳಗಾವಿ: ಸಹನಶೀಲ, ಮೇರು ವ್ಯಕ್ತಿತ್ವದ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಯು ವೈಯಕ್ತಿಕವಾಗಿ ನನಗೆ ನೋವನ್ನುಂಟು ಮಾಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬೇಸರ ವ್ಯಕ್ತಪಡಿಸಿದರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮದೇ ವ್ಯಕ್ತಿತ್ವದ ಮೂಲಕ ರಾಜ್ಯದಲ್ಲಿ ನಮ್ಮೆಲ್ಲರಿಗೂ ಆದರ್ಶವಾಗಿದ್ದರು. ಯುವಕರನ್ನು ಉತ್ತೇಜಿಸುತ್ತಿದ್ದರು. ಅವರ ರಾಜಕೀಯ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಮುಖ ವಿಚಾರಗಳಲ್ಲಿ ಅತ್ಯಂತ ಸಹನೆ, ಸಮಚಿತ್ತತೆಯಿಂದ ಸಚಿವ ಸಂಪುಟದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪಡೆದು ಸೂಕ್ತ ತೀರ್ಮಾನಗಳನ್ನು ಮಾಡುತ್ತಿದ್ದದ್ದು ಅವರ ರಾಜಕೀಯ ಜೀವನದ ವಿಶೇಷತೆ. ನಾನು ಅವರ ಜೊತೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ತದನಂತರ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೆ. ಬಹಳ ಹತ್ತಿರದಿಂದ ಅವರನ್ನು ನೋಡಿದ್ದೇನೆ ಎಂದರು.
ಅವರು ಸುಸಂಸ್ಕೃತಿ, ಸಜ್ಜನ ರಾಜಕಾರಣಿ. ಯಾರನ್ನೆ ಮಾತನಾಡಿಸುವುದರಿಂದ ಹಿಡಿದು, ಜೊತೆಯಲ್ಲಿ ಮಾತನಾಡುವಾಗ, ಚರ್ಚೆ ಮಾಡುವಾಗ, ಸಾರ್ವಜನಿಕವಾಗಿ ಅವರು ಮಾತನಾಡುತ್ತಿದ್ದ ಸಂದರ್ಭಗಳಲ್ಲಿ ಬಳಸುತ್ತಿದ್ದ ಪದಗಳು ಬಹುಶಃ ನಮಗೆ ಯಾರಿಗೆ ಬಳಸಲು ಆಗುವುದಿಲ್ಲ. ಹೀಗೆ ಒಮ್ಮೆ ಅವರೊಂದಿಗೆ ಮಾತನಾಡುವಾಗ, ‘ಪರಮೇಶ್ವರ್ ಭವಿಷ್ಯದ ಗಜಗರ್ಭದಲ್ಲಿ ಏನು ಅಡಗಿದೆ ಅಂತ ಯಾರಿಗೆ ಗೊತ್ತಿದೆ ಹೇಳಿ’ ಎಂದಿದ್ದರು. ನಾವಾಗಿದ್ದರೆ ಮುಂದೆನಾಗುತ್ತದೆ ನೋಡೋಣ ಬಿಡಿ ಎನ್ನುತ್ತಿದ್ದೆವು. ಅವರು ಮಾತನಾಡುತ್ತಿದ್ದ ಶೈಲಿ, ಪದಪ್ರಯೋಗ ಕರ್ನಾಟಕದ ಯಾವ ರಾಜಕಾರಣಿಯಲ್ಲಿಯೂ ನೋಡಲು ನನಗೆ ಸಾಧ್ಯವಾಗಿಲ್ಲ ಎಂದು ಸಚಿವರು ಹೇಳಿದರು.
ನಾನು ಅವರೊಂದಿಗೆ ಯುವಕನಾಗಿ ಕೆಲಸ ಮಾಡಿ, ಅನೇಕ ವಿಚಾರಗಳನ್ನು ಕಲಿತಿದ್ದೇನೆ. ಅವರಿಗೆ ರಾಜಕೀಯದಲ್ಲಿ ಎಲ್ಲವೂ ಸುಲಭವಾಗಿ ಸಿಕ್ಕಿತು ಅಂತ ಹೇಳಲಾಗುವುದಿಲ್ಲ. ನಟ ಡಾ. ರಾಜಕುಮಾರ್ ಅವರ ಅಪಹರಣ, ಕಾವೇರಿ ನೀರಿನ ಗಲಾಟೆಯ ಸಂದರ್ಭ, ಬರಗಾಲವನ್ನು ಎದುರಿಸಿ, ರಾಜ್ಯಕ್ಕೆ ಉತ್ತಮ ಸೇವೆಯನ್ನು ಮಾಡಿದ್ದಾರೆ. ಐಟಿ ವಲಯದಲ್ಲಿ ಬೆಂಗಳೂರು ನಗರವನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸಿದರು. ಇದರಿಂದ ಲಕ್ಷಾಂತರ ಯುವಕರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಇದೆಲ್ಲವು ಅವರ ದೂರದೃಷ್ಟಿ ರಾಜಕೀಯ ನಡೆಯಿಂದ ಸಾಧ್ಯವಾಗಿದೆ ಎಂದು ಹೇಳಿದರು.
ರಾಜ್ಯಕ್ಕೆ ಸಂಬಂಧಿಸಿದ ಅನೇಕ ರಹಸ್ಯವಾದ ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ನಟ ರಾಜಕುಮಾರ್ ಅವರ ಅಪಹರಣದ ಸಂದರ್ಭದಲ್ಲಿ ವೀರಪ್ಪನ್‌ಗೆ ಸಂಬಂಧಿಸಿದ ವಿಚಾರಗಳು, ದೆಹಲಿಯಲ್ಲಿ ಎಐಸಿಸಿ ವರಿಷ್ಟರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಸೇರಿದಂತೆ ಅವರೊಂದಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ಅವರ ರಾಜಕೀಯ ಜೀವನ ನನಗೆ ಅನುಕರಣೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಕೆಟ್ಟದಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುವುದನ್ನು ಕಾಣುತ್ತಿದ್ದೇವೆ. ಆದರೆ, ಎಸ್.ಎಂ.ಕೃಷ್ಣ ಅವರು ಕೆಟ್ಟಭಾಷೆಯ ಪದಪ್ರಯೋಗ ಮಾಡಿದ್ದನ್ನು ಎಲ್ಲಿಯೂ ನೋಡಲೇ ಇಲ್ಲ. ವಿಶೇಷವಾಗಿ ಯುವಕರಿಗೆ ಮಾದರಿಯಾಗಿ ನಿಲ್ಲುತ್ತಾರೆ. ದೇಶವು ಮೇದಾವಿ, ರಾಜನೀತಿಜ್ಞ, ಹಿರಿಯ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ನನಗೆ ನೋವಾಗಿದೆ. ಸಾರ್ವಜನಿಕ ಬದುಕಿಗೆ ನಷ್ಟವಾಗಿದೆ. ಅವರಿಗೆ ಯಾವ ರೀತಿಯ ಅಂತಿಮ ಗೌರವ ಸಲ್ಲಿಸಿದರು ಸಾಲುವುದಿಲ್ಲ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx