ತುಮಕೂರು: ಚೇಳೂರು-ತುಮಕೂರು ಮಾರ್ಗದ ಮುಖ್ಯ ರಸ್ತೆಯ ದುಸ್ಥಿತಿ ನೋಡಿದರೆ “ರಸ್ತೆ ಗುಂಡಿಯೊಳಗೋ, ಗುಂಡಿಯೇ ರಸ್ತೆಯೋ” ಅಂತ ತಿಳಿಯದೇ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ಕಂಡು ಬರುತ್ತದೆ.
ರಸ್ತೆಯಾದ್ಯಂತ ಗುಂಡಿಗಳೇ ಕಾಣುತ್ತಿದ್ದು, ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವವರಿಗೆ ಈ ಗುಂಡಿಮಯ ರಸ್ತೆ, ಅಕ್ಷರಶಃ ನರಕ ತೋರಿಸುತ್ತದೆ.
ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ರಸ್ತೆ ಅವ್ಯವಸ್ಥೆ ಸರಿಪಡಿಸದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ. ಪ್ರತಿನಿತ್ಯ ಇಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇರುತ್ತವೆ, ದ್ವಿಚಕ್ರವಾಹನ ಸವಾರರ ಪಾಡಂತೂ ಹೇಳತೀರದು ಎನ್ನುವಂತಾಗಿದೆ.
ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಳವಾಗುತ್ತಿವೆ. ಸರಕು ಮತ್ತು ಪ್ರಯಾಣಿಕರ ವಾಹನಗಳು ಗುಂಡಿಗಳಿಂದಾಗಿ ಹಾನಿಗೊಳಗಾಗುತ್ತಿವೆ. ಸುಗಮ ಸಂಚಾರ ಸಾಧ್ಯವಾಗದೇ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಗುಂಡಿಮಯ ರಸ್ತೆಯಲ್ಲಿ ಧೂಳಿನ ಮಳೆಯೇ ಸುರಿಯುವಂತೆ ಧೂಳು ಕಂಡು ಬಂದಿದೆ. ಸಂಬಂಧಿತ ಪ್ರಾಧಿಕಾರಗಳಾದ ಪಿಡಬ್ಲ್ಯೂಡಿ (PWD) ಮತ್ತು ಸ್ಥಳೀಯ ಆಡಳಿತ ಇಷ್ಟೆಲ್ಲ ಸಮಸ್ಯೆಗಳ ಅರಿವಿದ್ದರೂ, ಜಾಣ ಕುರುಡು ವಹಿಸಿದ್ದಾರೆ.
ಈ ರಸ್ತೆ ಸಮಸ್ಯೆಯ ವಿರುದ್ಧ ಜನ ರಸ್ತೆಗಿಳಿಯದೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಸ್ಥಳೀಯ ನಾಗರಿಕರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು, ಸಮಸ್ಯೆ ಬಗೆ ಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx