ತುಮಕೂರು: ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಸೂಚನಾ ಫಲಕಗಳ ಅರಿವಿನ ಕಾರ್ಯಕ್ರಮ ನಡೆಯಿತು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಸಿದ್ದಲಿಂಗಸ್ವಾಮೀಜಿಗಳು, ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು, ಅಪಘಾತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಪೋಷಕರು ಚಿಕ್ಕ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ನೀಡಬಾರದು, 18ವರ್ಷಆದ ನಂತರ ಅವರಿಗೆ ಲೈಸೆನ್ಸ್ ಕೊಡಿಸಿಯೇ ವಾಹನಗಳನ್ನು ನೀಡಬೇಕು, ಮಕ್ಕಳ ಜೀವ ಮುಖ್ಯ ವಾಹನ ಚಲಾಯಿಸುವಾಗ ನಿಧಾನವಾಗಿ, ಅಂತರ ಕಾಯ್ದುಕೊಂಡು, ರಸ್ತೆ ನಿಯಮಗಳನ್ನು ಪಾಲಿಸುತ್ತಾ ವಾಹನಗಳನ್ನು ಚಲಾಯಿಸಬೇಕು, ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಪೋಷಕರ ಆಕ್ರಂದನ ನೋಡಲು ಆಗುವುದಿಲ್ಲ, ಆಟೋ, ಬಸ್, ಇತ್ಯಾದಿ ವಾಹನಗಳಲ್ಲಿ ಎಷ್ಟು ಸೀಟು ಇದೆಯೋ ಅಷ್ಟೇ ಜನರನ್ನು ಹಾಕಬೇಕು, ಚಾಲಕರು ದುಡ್ಡಿನ ಆಸೆಗಾಗಿ ಹೆಚ್ಚು ಜನರನ್ನು ಕುಳ್ಳಿರಿಸಿ ಅಪಘಾತವಾದರೆ ಆ ಸಂಸಾರಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರಲ್ಲದೇ, ವಿದ್ಯಾರ್ಥಿಗಳು ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡುತ್ತಾ, ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ, ಇದನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ, ವಾಹನ ಸವಾರರು ವಾಹನ ಚಲಾಯಿಸುವಾಗ ಹೆಚ್ಚಿನ ನಿಗಾ ವಹಿಸಿ ವಾಹನಗಳನ್ನು ಓಡಿಸಬೇಕು, ವಾರದ ರಜೆಗಳಲ್ಲಿ ಹೆಚ್ಚು ಅಪಘಾತಗಳನ್ನು ತಡೆಯಲು, ರಸ್ತೆ ದಟ್ಟಣೆಗಳನ್ನು ತಡೆಯಲು ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕು, ನಮ್ಮ ದೇಶಗಳಲ್ಲಿ ನಿಯಮಗಳನ್ನು ಪಾಲಿಸುವುದಿಲ್ಲ ಆದರೆ ವಿದೇಶಕ್ಕೆ ಹೋದರೆ ಅಲ್ಲಿ ಕಟ್ಟುನಿಟ್ಟಾಗಿ ಪಾಲಿಸುತ್ತೀರಿ ಏಕೆಂದರೆ ಅಲ್ಲಿ ಕಠಿಣ ಕಾನೂನುಗಳಿಗೆ, ವಿದ್ಯಾರ್ಥಿಗಳು, ಯುವಕ–ಯುವತಿಯರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಯುವಕರು 18 ವರ್ಷ ಆದ ಮೇಲೆ ವಾಹನ ಚಾಲನೆ ಮಾಡಬೇಕು, ಎಲ್ಲರೂ ಡಿ.ಎಲ್.ಪಡೆದು ನಂತರ ವಾಹನ ಚಲಾಯಿಸಬೇಕು, ನಾವು ಸರಿಯಾಗಿ ವಾಹನ ಚಾಲನೆ ಮಾಡುತ್ತಿದ್ದೇವೆ ಎಂದು ನೋಡುವುದಲ್ಲ ಎದುರುಗಡೆಯಿಂದ ಬರುವ ವ್ಯಕ್ತಿ ಸರಿಯಾಗಿ ಬರುತ್ತಿದ್ದಾನಾ ಎಂದು ನೋಡಿ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.
ಎಸ್.ಪಿ.ಅಶೋಕ್.ಕೆ.ವಿ.ಮಾತನಾಡುತ್ತಾ, ವಾಹನ ಚಾಲನೆ ಮಾಡುವಾಗ ಎಡ ಮತ್ತು ಬಲಭಾಗವನ್ನು ನೋಡಬೇಕು, ಪೋಷಕರು ವಾಹನ ಚಲಾಯಿಸುವಾಗ ತಮ್ಮ ಮಕ್ಕಳಿಗೆ ಯಾವ ರೀತಿ ವಾಹನ ಚಾಲನೆ ಮಾಡಬೇಕೆಂಬುದನ್ನು ಹೇಳಿ ತೋರಿಸಬೇಕು, ಕೇವಲ ಕಾನೂನುಗಳಿಗೆ ಹೆದರಿ ವಾಹನ ಚಲಾಯಿಸುವುದಲ್ಲ ನಿಧಾನವಾಗಿ ಎಡಭಾಗದಲ್ಲಿಯೇ ವಾಹನ ಚಲಾಯಿಸಬೇಕು, ವಾಹನಗಳಿಗೆ ರಾತ್ರಿ ಸಮಯದಲ್ಲಿ ಎದುರು ಬರುವವರಿಗೆ ಕಾಣಬೇಕು ಎಂದು ರೇಡಿಯಂ ಸ್ಟಿಕ್ಕರ್ ಗಳನ್ನು ಹಾಕಬೇಕು, ಟ್ರಾಕ್ಟರ್, ಟಿಪ್ಪರ್ ಗಳಿಗೆ ದೊಡ್ಡ ದೊಡ್ಡ ರೇಡಿಯಂ ಸ್ಟಿಕ್ಕರ್ ಗಳನ್ನು ಹಾಕಲು ಆರ್.ಟಿ.ಓ.ದವರು ಸಹ ಕ್ರಮಕೈಗೊಳ್ಳಬೇಕು, ಅಪಘಾತವಾದಾಗ ಪ್ರಾಣವೇ ಹೋಗುತ್ತದೆ, ಆದ್ದರಿಂದ ವಾಹನ ಚಲಾಯಿಸುವಾಗ ಎಲ್ಲರೂ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು, ಎಲ್ಲರೂ ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ಕಿವಿಮಾತು ಹೇಳಿದರು.
ಬಿ.ವಿ.ಅಶ್ಚಿಜ ಮಾತನಾಡುತ್ತಾ, ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಬೇಕು, ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಬಳಸಬೇಕು, ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಬಳಸಬೇಕು, ಎಷ್ಟು ಸೀಟು ಇದೆಯೋ ಅಷ್ಟೇ ಜನರನ್ನು ಕುಳಿಸಿಕೊಂಡು ವಾಹನ ಚಲಾಯಿಸಬೇಕು, ಎಸ್.ಪಿ.ಕಚೇರಿ ಮುಂಭಾಗದಲ್ಲಿ ರಸ್ತೆ ಸುರಕ್ಷತಾ ಮಾದರಿ ಉದ್ಯಾನವನ ಮಾಡಿದ್ದೇವೆ. ಎಲ್ಲರೂ ಅಲ್ಲಿಗೆ ಒಮ್ಮೆ ಭೇಟಿ ನೀಡಿ ಅದನ್ನು ನೋಡಿ ತಿಳಿದುಕೊಳ್ಳಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಎಎಸ್ಪಿ ಮರಿಯಪ್ಪ, ಆರ್ ಟಿಓ ಎ.ವಿ.ಪ್ರಸಾದ್, ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಪ್ರೊ.ಟಿ.ಗಂಗಾಧರಯ್ಯ, ಪ್ರೊ.ಸಿ.ಎಸ್.ಸೋಮಶೇಖರಯ್ಯ, ನಾಗೇಶ್.ಹೆಚ್.ಆರ್, ದಿನೇಶ್.ಜಿ.ಎಂ, ಆಶಾರಾಣಿ, ಬಸವರಾಜಪ್ಪ.ಆರ್, ಕೆ.ಎಸ್. ಲಿಂಗದೇವರಪ್ಪ,ಚೇತನ್ ಕುಮಾರ್.ಎನ್.ಜಿ, ಬಿ.ಎಸ್.ಸೂರ್ಯನಾರಾಯಣಗುಪ್ತ, ದಕ್ಷಿಣಾಮೂರ್ತಿ, ಪ್ರೊ.ಮೋಹನ್ ಕುಮಾರ್, ಪ್ರಸನ್ನಕುಮಾರ್.ಹೆಚ್, ಜಲಜಾಕ್ಷಿ, ಕೆ.ಎಸ್.ಇಚಿದ್ರಾಣಿ, ಮಧು.ಎಸ್.ಕುಮಾರ್, ಡಾ.ಕಿಶೋರ್, ಮೋಟಾರು ವಾಹನ ತರಬೇತಿ ಸಂಸ್ಥೆಯ ಅಧ್ಯಕ್ಷ ಡಿ. ಶಿವಕುಮಾರ್, ಕೆ.ಕೃಷ್ಣಮೂರ್ತಿ, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx