- ಜೆ. ರಂಗನಾಥ, ತುಮಕೂರು
ಭರತ ಖಂಡದ ವಾಸ್ತುಶಿಲ್ಪ ಪರಂಪರೆ ತನ್ನದೇ ಆದ ಸಾಂಪ್ರದಾಯಿಕ ವಾಸ್ತು ಶಿಲ್ಪಕ್ಕೆ ಹೆಸರಾಗಿದೆ. ಇದು ವಿಶ್ವ ಮಾನ್ಯ ಸ್ಥಾನಮಾನ ಹೊಂದಿದೆ. ಭಾರತ ಖಂಡದ ಹಲವಾರು ರಾಜ ಮನೆತನಗಳು ವಾಸ್ತುಶಿಲ್ಪ ಜಗತ್ತಿಗೆ ಹಲವಾರು ಕೊಡುಗೆಗಳನ್ನು ನೀಡಿ ವಿಶ್ವ ಮಾನ್ಯವಾಗಿವೆ.
ಕನ್ನಡ ನಾಡನ್ನಾಳಿದ ಹಲವಾರು ರಾಜಮನೆತನಗಳು ಅವರ ಸಾಮಂತ ಆಳ್ವಿಕೆಗಾರರು, ಪಾಳು ಪಟ್ಟುಗಳ ನ್ನಾಳಿದ ಪಾಳೆಗಾರರು ನೀಡಿದ ಕೊಡುಗೆ ಅಪಾರ. ಇಂತಹ ಶಿಲ್ಪಕಲಾ ಜಗತ್ತಿಗೆ ಅಂದು ರಾಜ -ಮಹಾರಾಜರು ನೀಡಿದ ಕೊಡುಗೆಗಳಲ್ಲಿ ಚಿತ್ರದುರ್ಗ ಜಿಲ್ಲೆ ,ಹೊಸದುರ್ಗ ತಾಲೂಕಿನ ,ಶ್ರೀರಾಂಪುರ ಹೋಬಳಿಯ ಹಗ್ಗೆರೆ ಗ್ರಾಮದ ಹೊಯ್ಸಳ ವಾಸ್ತುಶಿಲ್ಪದ ಶ್ರೀ ಸುಪಾರ್ಶ್ವನಾಥ ಜೈನಬಸದಿಯೂ ಒಂದು.
ಉತ್ತರ ಕರ್ನಾಟಕದ ಬೆಳಗಾವಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಸವದತ್ತಿಯ ರಟ್ಟರು ಜೈನ ಧರ್ಮೀಯರು. ಅವರು ಬೆಳಗಾವಿಯ ಕೋಟೆಯಲ್ಲಿ ಕಮಲ ಬಸದಿ ಯನ್ನು ನಿರ್ಮಿಸಿದ್ದು, ಅದು ಅವರ ಮೂಲ ಮನೆ ದೇವರಾದ ಶ್ರೀ ನೇಮಿನಾಥ ತೀರ್ಥಂಕರ ಬಸದಿಯಾಗಿದೆ. ಈ ಬಸದಿಯ ಒಳಗೆ ಹಾಗೂ ಹೊರಭಾಗಗಳೆಲ್ಲ ಕಮಲಕ್ಕೆ ಶಿಲ್ಪಗಳಿಂದ ಕೆತ್ತನೆಯ ರೂಪವಿದ್ದು ಇದನ್ನು ಕಮಲ ಬಸದಿ ಎನ್ನುತ್ತಾರೆ.
ಇದೇ ಮಾದರಿಯಲ್ಲಿ ದಕ್ಷಿಣ ಕರ್ನಾಟಕದ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ , ಶ್ರೀರಾಂಪುರ ಹೋಬಳಿಯ ಹೆಗ್ಗೆರೆ ಗ್ರಾಮದಲ್ಲಿ ಹೊಯ್ಸಳ ಸಾಮಂತರು ಆಳ್ವಿಕೆ ನಡೆಸಿದ್ದು ಅವರ ಕಾಲದಲ್ಲಿ 500 ಕ್ಕೂ ಹೆಚ್ಚು ಕಮಲಶಿಲ್ಪಗಳಿರುವ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಬಸದಿ ನಿರ್ಮಿಸಿದ್ದಾರೆ.
ಈ ಹೆಗ್ಗೆರೆ ಗ್ರಾಮ ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ. ಇಲ್ಲಿನ ಬಸದಿಯ ಶಿಲ್ಪಕಲೆ ಹೊಯ್ಸಳ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ , ಜಿನಾಲಯದ ರಚನೆ ಬಸದಿಯ ಹೊರ ಹಾಗೂ ಒಳ ರಚನೆಗಳು, ಶಿಲ್ಪಕಲೆ ಸೌಂದರ್ಯ, ಕಮಲಶಿಲ್ಪಗಳ ವಿವಿಧ ರೂಪದ ಕಿತ್ತನೆ ಜನರ ಮನಸೂರೆಗೊಂಡಿದೆ .ಇದು ಬೆಳಗಾವಿಯಲ್ಲಿ ಸವದತ್ತಿಯ ರಟ್ಟರು ನಿರ್ಮಿಸಿದ ಕಮಲ ಬಸದಿಯನ್ನು ನೆನಪಿಸುತ್ತದೆ.
ಹೆಗ್ಗೆರೆ ಶ್ರೀ ಸುಪಾರ್ಶ್ವನಾಥ ಬಸದಿ ಶಿಲ್ಪಕಲಾ ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಿದೆ ಈ ಬಸದಿಯನ್ನ ಸಂಪೂರ್ಣ ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ .ಬಸದಿ ಗರ್ಭಗುಡಿ, ನವರಂಗ ,ಸುಖನಾಸಿ, ಪ್ರದಕ್ಷಿಣ ಪಥ ಹೊಂದಿದ್ದು ಉತ್ತರಾಭಿಮುಖವಾಗಿದೆ.
ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಬಸದಿಯ ವಿಶೇಷವೇನೆಂದರೆ ಎಲ್ಲಿ ನೋಡಿದರೂ ಕಮಲಶಿಲ್ಪಗಳು ,ಬಸದಿಯ ಹೊರ ಒಳಗೋಡೆಗಳ ಮೇಲಿನ ಬಸದಿಯ ಚಾವಣಿಯ ಸ್ತಂಭಗಳ ಮೇಲೆ ,ಬೋಧಿಗೆ ,ಭುವನೇಶ್ವರಿಗಳ ಮೇಲೆ ಕಮಲ ದಳಗಳಿದ್ದು ಹತ್ತಾರು ಬಗೆಯ ಕಮಲಗಳನ್ನು ವಿವಿಧ ಕಲಾತ್ಮಕ ಆಕಾರದಲ್ಲಿ , ಉತ್ತಮ ಸೂಕ್ಷ್ಮ ಕುಸುರಿಯಿಂದ ಕೆತ್ತಲಾಗಿದೆ. ಈ ಬಸದಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಶಿಲ್ಪಗಳಿದ್ದು, ಉತ್ತರ ಕರ್ನಾಟಕದಲ್ಲಿ ಬೆಳಗಾವಿಯ ಕೋಟೆಯಲ್ಲಿರುವ ಶ್ರೀ ನೇಮಿನಾಥ ತೀರ್ಥಂಕರ ಜಿನಾಲಯ ಕಮಲ ಬಸದಿಯಾದರೆ , ದಕ್ಷಿಣ ಕರ್ನಾಟಕದಲ್ಲಿ ಹೆಗ್ಗೆರೆಯ ಶ್ರೀ ಸುಪಾರ್ಶ್ವನಾಥ ಜಿನಾಲಯ ಕಮಲ ಬಸದಿಯಾಗಿದೆ. ಇಂತಹ ವೈಶಿಷ್ಟ್ಯವನ್ನು ಬೇರೆಯಲ್ಲೂ ಕಾಣುವುದು ಅಪರೂಪ.
ಇಲ್ಲಿ ಕಮಲಶಿಲ್ಪಗಳಿಂದ ಜೈನ ಧರ್ಮದ ನೀತಿ ಅಂದರೆ ಶಾಂತಿ ಪ್ರಿಯರಾದ ಜೈನಧರ್ಮೀಯರ ಮನಸ್ಸು, ನೀತಿಗಳು, ಕಮಲದಂತೆ ಸ್ವಚ್ಛ, ಶುದ್ಧ ಹಾಗೂ ಸಮೃದ್ಧವಾಗಿರಬೇಕು ಎಂಬುದಾಗಿದೆ. ಈ ಬಸದಿ ಶಿಲ್ಪಕಲಾ ಸೌಂದರ್ಯವನ್ನು ಮೈತುಂಬಿಕೊಂಡು ವೈವಿಧ್ಯಮಯ ಕಮಲಗಳಿಂದ ಬಸದಿ ಮತ್ತಷ್ಟು ಶಿಲ್ಪಕಲಾ ಸೌಂದರ್ಯದ ರೂಪ ಹೆಚ್ಚಾಗಿದೆ. ಬಸದಿಯನ್ನು ಸುಮಾರು ಮೂರು ಅಡಿಗಳ ಎತ್ತರದ ಜಕುತಿಯ ಮೇಲೆ ನಿರ್ಮಾಣವಾಗಿದ್ದು ,ಬಸದಿಯ ಹೊರಗೋಡೆಗಳಲ್ಲಿ ಸ್ತಂಭ ಚಿತ್ರಗಳು ,ಕಮಲಶಿಲ್ಪಗಳು, ಚಿತ್ರ ಪಟ್ಟಿಕೆಗಳ ಸಾಲುಗಳಿವೆ. ಬಸದಿಯ ಮುಖ್ಯದ್ವಾರದಲ್ಲಿ ಬಾಗಿಲುಗಳಲ್ಲಿ ಕಮಲ ಚಿತ್ರಗಳಿದ್ದು, ಮುಖ್ಯದ್ವಾರದ ಮೆಟ್ಟಿಲಿನ ಅಕ್ಕ–ಪಕ್ಕ ಕಮಲದ ಮೊಗ್ಗಿನ ಆಕೃತಿಯಲ್ಲಿ ಕಲ್ಲುಗಳನ್ನು ನಿರ್ಮಿಸಲಾಗಿದೆ. ಬಸದಿಯ ಪ್ರವೇಶ ದ್ವಾರ ಉತ್ತಮ ಬಾಗಿಲು ವಾಡ ಹೊಂದಿದ್ದು, ಕಳಸ ಸಮೇತ ಬಳ್ಳಿ ವರಿಸೆ ಚಿತ್ರಗಳಿವೆ .ಬಸದಿಯ ಹೊರಭಾಗದ ರಚನೆ ಬಸದಿಯ ನಕ್ಷತ್ರ ವಿನ್ಯಾಸ ಹೊಂದಿದ್ದು ,ಬಸದಿಯ ಮೇಲ್ಭಾಗದ ಹೊರ ಚಾವಣಿಗಳಲ್ಲಿ ಹೂ ಮುಡಿದಿರುವಂತೆ ರಚಿಸಲಾಗಿದೆ. ಬಸದಿಯ ಹೊಸ್ತಿಲುಗಳು ವಿಭಿನ್ನ ಶೈಲಿ ಹೊಂದಿವೆ. ನವರಂಗದ ಪ್ರವೇಶ ದ್ವಾರದಲ್ಲಿ ಜಯ – ವಿಜಯ ರಿದ್ದು ಲಲಾಟದಲ್ಲಿ ಗಜ ಸಮೇತ ತೀರ್ಥಂಕರರ ಬಿಂಬಗಳಿವೆ.
ನವರಂಗದಲ್ಲಿ 16 ಶಿಲ್ಪ ಸ್ತಂಭಗಳಿದ್ದು ಇದರಲ್ಲಿ 12 ಸ್ತಂಭಗಳು ಕಟ್ಟಡದೊಳಗೆ ಸೇರಿದ್ದು ವಿಭಿನ್ನವಾದ ವಿನ್ಯಾಸ ಹೊಂದಿವೆ, ಉಳಿದ ನಾಲ್ಕು ಉತ್ತಮ ಶಿಲ್ಪ ಕಂಬಗಳಾಗಿದ್ದು, ಮೇಲ್ಚಾವಣಿಯ ಒಂಬತ್ತು ಅಂಕಗಳಲ್ಲಿ ಕಮಲ ಪುಷ್ಪಗಳ ಕೆತ್ತನೆ ಉತ್ತಮ ಹಾಗೂ ಸೂಕ್ಷ್ಮ ಕುಸುರಿಯಿಂದ ಕೂಡಿದೆ. ಉತ್ತಮ ಬೋಧಿಗೆ ,ಭುವನೇಶ್ವರ ಹೊಂದಿದ್ದು, ಎಲ್ಲಾ ಕಡೆಗಳಲ್ಲೂ ಕಮಲಶಿಲ್ಪಗಳ ಬಿಂಬಗಳು ವಿಶೇಷವಾಗಿದೆ.
ಸುಖನಾಸಿಯ ಪ್ರವೇಶ ದ್ವಾರದಲ್ಲಿ ನಾಟ್ಯಬಂಗಿಯ ಪದ್ಮಾವತಿ ಯಕ್ಷಿ ಶಿಲ್ಪ ಕೃತಿ ಉತ್ಸವ ಮೂರ್ತಿಯಾಗಿದೆ. ಶ್ರೀ ಸುಪಾರ್ಶ್ವನಾಥ ತೀರ್ಥಂಕರರ ಲಾಂಛನ ಸ್ವಸ್ತಿಕ್ ಆಗಿದ್ದು ಯಕ್ಷ ಮಾತಂಗ, ಯಕ್ಷಿ ಕಾಳಿ ಇದ್ದು ಶ್ವೇತಾಂಬರ ಪರಂಪರೆಯಲ್ಲಿ ಶಾಂತ –ಶಾಂತದೇವಿ ಎಂದಿದೆ.
ಗರ್ಭಗುಡಿಯಲ್ಲಿ ಹೊಯ್ಸಳ ವಾಸ್ತುಶಿಲ್ಪದ ದೊಡ್ಡ ಕಮಲ ಪೀಠವಿದ್ದು ,ಈ ಬಸದಿ ನಿರ್ಮಾಣದ ಸಂದರ್ಭದಲ್ಲಿ ಇದ್ದ ಜಿನ ಮೂರ್ತಿಗಳು ಈಗಿಲ್ಲ. ಪೀಠದ ಮೇಲೆ ನಂತರದ ದಿನಗಳಲ್ಲಿ ಹೊಸ ಶ್ರೀಸುಪಾರ್ಶ್ವನಾಥ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಬ್ರಹ್ಮ ದೇವರ ವಿಗ್ರಹ ಅಲ್ಲದೆ, ಶ್ರೀ ಸುಪಾರ್ಶ್ವನಾಥ ಲೋಹದ ಹಾಗೂ ಶಿಲೆಯ ಉತ್ಸವ ಮೂರ್ತಿಗಳಿವೆ ಅಲ್ಲದೆ ಪ್ರವೇಶ ದ್ವಾರದ ಮೇಲ್ಭಾಗದ ಲಲಾಟದಲ್ಲಿ ಪಟ್ಟಿಕೆ ಇದೆ. ಈ ಬಸದಿ ಗೆ ಶಿಖರ, ಮಾನಸ್ತಂಭ ವಿಲ್ಲ ಬಸದಿಯ ಮುಂದೆ ಜಿನ ಶಾಸನ, ನಿಷದಿ ಕಲ್ಲುಗಳಿದ್ದು ಇವುಗಳನ್ನು ಸಂರಕ್ಷಿಸಿಡಲಾಗಿದೆ, ಅಲ್ಲದೆ ಬಸದಿ ಅವಶೇಷಗಳು ಅಲ್ಲಲ್ಲಿ ಬಿದ್ದಿವೆ.
ಶ್ರೀ ಸು ಪಾರ್ಶ್ವನಾಥ ತೀರ್ಥಂಕರ ಬಸದಿಯನ್ನು ಕ್ರಿಸ್ತ.ಶಕ 1161 ರಲ್ಲಿ ಇಲ್ಲಿರುವ ಶಾಸನದ ಪ್ರಕಾರ ಗೋವಿದೇವನು ತನ್ನ ಮಡದಿ ಮಹದೇವಿ ನಾಯಕಿಯ ನೆನಪಿಗಾಗಿ ಈ ಬಸದಿ ನಿರ್ಮಿಸಿದ್ದು ಈ ಬಸದಿಗೆ. “ಶ್ರೀ ಚನ್ನ ಪಾರ್ಶ್ವ ದೇವರ ಬಸದಿ “. ಎಂಬ ಹೆಸರಿಟ್ಟ ನೆಂದಿದ್ದು , ಇಲ್ಲಿ ಎಂಟು ರೀತಿಯ ಪೂಜೆಗಳಿಗಾಗಿ ಹಾಗೂ ಜೈನ ಸನ್ಯಾಸಿಗಳ ಆಹಾರಕ್ಕಾಗಿ ಬಿಟ್ಟಿದೇವನು ಅನೇಕ ರೀತಿ ದತ್ತಿಬಿಟ್ಟಿದ್ದನು ,ಜಕ್ಕಣ ಎಂಬುವನು ಮಲ್ಲಿಗೆರೆ ಬಳಿ ಗದ್ದೆ ಆಗುವ ಭೂಮಿಯನ್ನು ದತ್ತು ನೀಡಿರುವ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ.
ಹೊಯ್ಸಳರ ವಲ್ಲಭ ರಾಜದೇವನು ಬೂದಾಳು ಸೀಮೆಯ( ಬೂದಿಹಾಳ್) ಈ ಬಸದಿಯನ್ನ ಜೀರ್ಣೋದ್ಧಾರ ಮಾಡಿಸಿ ಗದ್ದೆ –ಜಮೀನುಗಳನ್ನು ದತ್ತಿ ಬಿಟ್ಟಿರುವ ಬಗ್ಗೆ ಹಾಗೂ ಸಿರಿಮನ ತಮ್ಮನಾದ ಮಲ್ಲಯ್ಯ ನಾಯಕನು ತನ್ನ ಆಡಳಿತಾವಧಿಯಲ್ಲಿ ಬಸದಿಗೆ ಗದ್ದೆ ಜಮೀನನ್ನು ದತ್ತಿ ನೀಡಿರುವ ಬಗ್ಗೆ ಶಾಸನವಿದೆ. ಇಲ್ಲಿ ಹಲವಾರು ನಿಷದಿ ಶಾಸನಗಳಿದ್ದು, ಜೈನ ಮುನಿಗಳ ತಾಣವಾಗಿತ್ತು. ಕ್ರಿಸ್ತಶಕ 1163 ರಲ್ಲಿ ಮಾಣಿಕ್ಯ ನಂದಿ ಸಿದ್ದಾಂತ ದೇವರ ಶಿಷ್ಯ ಮೇಘ ಚಂದ್ರ ಭಟ್ಟರಕ ದೇವರು ಸನ್ಯಾಸ ವಿಧಿಯಿಂದ ಸಮಾಧಿ ಹೊಂದಿದರೆಂದು ನಿಷದಿ ಶಾಸನ ಹೇಳುತ್ತದೆ. ಅಲ್ಲದೆ ತ್ರಿಭುವನ ಕೀರ್ತಿಯ ಮಗನಾದ ಚಂದ್ರ ಕೀರ್ತಿಯು ,ಕ್ರಿಸ್ತಶಕ 1292 ರಲ್ಲಿ ದೇಹ ತ್ಯಜಿಸಿದ ಬಗ್ಗೆ ಮತ್ತೊಂದು ನಿಷದಿ ಶಾಸನ ತಿಳಿಸುತ್ತದೆ.
ಈ ಹಿಂದೆ ಈ ಭಾಗದಲ್ಲಿ ವಿಹಾರದಲ್ಲಿದ್ದ ಶ್ರೀ ಪಾಯಸಾಗರ ಮುನಿ ಮಹಾರಾಜರು 1942ರಲ್ಲಿ ಶ್ರೀ 1008 ಶ್ರೀ ಸುಪಾರ್ಶ್ವನಾಥ ತೀರ್ಥಂಕರರ ವಿಗ್ರಹ ಸ್ಥಾಪಿಸಿ ,ಬ್ರಹ್ಮ ಯಕ್ಷ ದೇವರು ಹಾಗೂ ಪದ್ಮಾವತಿ ಯಕ್ಷಿ ವಿಗ್ರಹಗಳು , ಹಳೆಯ ವಿಗ್ರಹಗಳಾಗಿದ್ದು ಶ್ರೀ ಬ್ರಹ್ಮ ದೇವರ ಲೋಹದ ಉತ್ಸವ ಮೂರ್ತಿಯನ್ನು ಕೆಲ ದಶಕಗಳ ಹಿಂದೆ ಮಾಡಿಸಲಾಗಿದೆ.
ಮೈಸೂರು ಪುರಾತತ್ವ ಇಲಾಖೆಯವರು ಈ ಬಸದಿಯನ್ನು 1994ರಲ್ಲಿ ದುರಸ್ತಿ ಮಾಡಿಸಿದ್ದಾರೆ. ಈ ಹಿಂದೆ ಈ ಬಸದಿಗೆ ಸುಣ್ಣ- ಬಣ್ಣ ಬಳಿದು ಬಸದಿಯ ವಾಸ್ತುಶಿಲ್ಪ ಹಾಳಾಗಿತ್ತು, ಆದ್ದರಿಂದ ಬಸದಿಯ ಬಿತ್ತಿ ಚಿತ್ರಗಳಿಗೆ ರಾಸಾಯನಿಕ ಸಿಂಪಡಿಸಿ ಸುಣ್ಣ –ಬಣ್ಣ ತೊಳೆದು ಅದರ ಮೂಲ ರೂಪಕ್ಕೆ ತರಲಾಯಿತು, ಇದರಿಂದ ಶಿಲ್ಪಕಲೆಯ ಮೂಲ ಸೌಂದರ್ಯ ಹೊರ ಹೊಮ್ಮಲು ಸಾಧ್ಯವಾಯಿತು. ಅಲ್ಲದೆ ಬಸದಿಯ ಮೇಲ್ಚಾವಣಿಯನ್ನು ಸಹ ದುರಸ್ತಿಗೂಳಿಸಿದ್ದಾರೆ.
ಹೆಗ್ಗೆರೆಯ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಬಸದಿ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನ ಗದ್ದೆ ಬಸ್ತಿ ಮಠದ ಜೈನ ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ. ಈ ಐತಿಹಾಸಿಕ ತಾಣ ಹೆಗ್ಗೆರೆ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಬಸದಿ ರಾಜಧಾನಿ ಬೆಂಗಳೂರಿನಿಂದ 180 ಕಿ.ಮೀ., ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ 85 ಕಿ. ಮೀ, ತಾಲೂಕು ಕೇಂದ್ರ ಹೊಸದುರ್ಗದಿಂದ 26 ಕಿ.ಮೀ, ನೆರೆಯ ಜಿಲ್ಲಾ ಕೇಂದ್ರವಾದ ತುಮಕೂರು ಜಿಲ್ಲಾ ಕೇಂದ್ರದಿಂದ 109 ಕಿ. ಮೀ ಚಿಕ್ಕನಾಯಕನಹಳ್ಳಿಯಿಂದ 36 ಕಿ.ಮೀ. ಹಾಗೂ ಹುಳಿಯಾರಿನಿಂದ 12 ಕಿ.ಮೀ ದೂರವಿದೆ .ಸದಾ ಬಸ್ ಸೌಕರ್ಯವಿದೆ. ಇದು ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ ಸಂಖ್ಯೆ 47 ರ ಬದಿಯಲ್ಲಿದ್ದು , ಈ ಹೆದ್ದಾರಿ ಹೆಗ್ಗೆರೆ ಗ್ರಾಮದ ಮೂಲಕವೇ ಹಾದು ಹೋಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4