ತುಮಕೂರು: ಪ್ರಸ್ತುತ ಸಮಾಜದಲ್ಲಿ ಯುವಕ ಯುವತಿಯರಿಗೆ ತಂತ್ರಜ್ಞಾನ ಎಂಬುದು ವ್ಯಸನವಾಗಿದೆ. ಅದರಿಂದ ಅವರು ಹೊರಬರಲಾಗುತ್ತಿಲ್ಲ. ಆದ್ದರಿಂದ ತಂತ್ರಜ್ಞಾನದಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಆಗುತ್ತಿವೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗವು ಬುಧವಾರ ಹಮ್ಮಿಕೊಂಡಿದ್ದ ‘ಸೈಬರ್ ಭದ್ರತೆ ಮತ್ತು ಎಥಿಕಲ್ ಹ್ಯಾಕಿಂಗ್’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನಗಳನ್ನು ಬಳಸಲು ಇಂದು ಉತ್ತಮ ವೇದಿಕೆಗಳಿವೆ. ಆದರೆ ಅವುಗಳನ್ನು ಕೆಲವು ಸೈಬರ್ ವಂಚಕ ಗುಂಪುಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಎಷ್ಟೋ ವಿದ್ಯಾವಂತರು ಕೂಡ ಇವರಿಂದ ಶೋಷಣೆಗೊಳಗಾಗಿದ್ದಾರೆ. ವಿದ್ಯಾವಂತರು ಇಂತಹ ಸಮಸ್ಯೆಗಳ ಬಗ್ಗೆ ಸಾಧ್ಯವಾದಷ್ಟು ತಿಳುವಳಿಕೆ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ಮೋಹನ ಮಾತನಾಡಿ, ಸೈಬರ್ ಕ್ರೈಂ ಈಗ ಒಂದು ಆಯುಧವಾಗಿದೆ. ಕೂತಲ್ಲಿಯೇ ಎಲ್ಲವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದರು.
ಕೋವಿಡ್ ಸಮಯದಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸಿದ ಸಾಮಾಜಿಕ ಮಾಧ್ಯಮವನ್ನು ನಂತರದ ದಿನಗಳಲ್ಲಿ ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಎಷ್ಟೋ ಮಂದಿಗೆ ತಿಳಿದಿರುವುದಿಲ್ಲ. ತಿಳಿದವರು ಸಾಮಾಜಿಕ ಜಾಗೃತಿಗೆ ಶ್ರಮಿಸಬೇಕು ಎಂದರು.
ಸಂಘಟನಾ ಕಾರ್ಯದರ್ಶಿ ಡಾ.ಕುಸುಮಕುಮಾರಿ ಬಿ.ಎಂ., ಚಿನ್ಮಯ್ ಜೆ., ಸುಜಯ್ ಎ.ಕೆ. ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4