ನಂಜನಗೂಡು: ಜೀವನಕ್ಕೆ ಆಧಾರವಾಗಿದ್ದ ಎರಡು ಹಸುಗಳನ್ನು ಹುಲಿಯೊಂದು ಕೊಂದು ಹಾಕಿದ್ದು, ಇದರಿಂದ ತಾಲ್ಲೂಕಿನ ಹೆಡಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮಹದೇವನಗರ ಗ್ರಾಮದ ಸಾಕಮ್ಮ ಕೊಂ ಪಾಪಣ್ಣ ಎಂಬವರಿಗೆ ತೀವ್ರ ನಷ್ಟವಾಗಿದೆ.
ಅಂದಾಜು 150000 ರೂ. ಬೆಲೆ ಬಾಳುವ ಹಾಲು ಕರೆಯುವ ಹಿಲಾತಿ ಹಸುಗಳನ್ನು ಬಂಡೀಪುರ ರಾಷ್ಟ್ರೀಯ ಹುಲಿ ಸುರಕ್ಷಿತ ಅರಣ್ಯದಿಂದ ಬಂದ ಹುಲಿಯೊಂದು ಕೊಂದು ತಿಂದು ಹಾಕಿದೆ. ಹಸುಗಳನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಇದೀಗ, ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದೆ.
ಈ ಕುರಿತು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದರೆ, ಈ ಜಮೀನು ಅರಣ್ಯ ಪ್ರದೇಶದ ಭಾಗದಲ್ಲಿರುವುದರಿಂದ ಯಾವುದೇ ಪರಿಹಾರ ನೀಡಲು ಬರುವುದಿಲ್ಲವೆಂದು ನಿರ್ಲಕ್ಷಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತನದ ಉತ್ತರದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದು, ಆದರೆ ಸ್ಥಳೀಯರ ನೆರವಿನಿಂದ ಅವರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
ಕುಟುಂಬದ ಸದಸ್ಯರು ಮಾನಸಿಕವಾಗಿ ತೀವ್ರ ನೊಂದಿದ್ದು, ಅವರಿಗೆ ತಕ್ಷಣವೇ ಪರಿಹಾರ ನೀಡುವ ಮೂಲಕ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಇಲಾಖಾಧಿಕಾರಿಗಳು ಮಾಡಬೇಕು. ಆ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ, ಅರಣ್ಯ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB