ಕೊರಟಗೆರೆ: ತಾಲೂಕಿನ ಮಹಾಲಿಂಗನಹಟ್ಟಿಯಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಹಳ್ಳ ಕೊಳ್ಳಗಳನ್ನು ದಾಟಿ 1 ಕಿಲೋ ಮೀಟರ್ ದೂರ ನಡೆದು ನೀರನ್ನು ತರಬೇಕು, ಇದು ಇಲ್ಲಿನ ಜನರ ಪ್ರತಿನಿತ್ಯದ ಕೆಲಸ ಎಂಬಂತಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಇವತ್ತು ಸರಿ ಹೋಗುತ್ತೆ, ನಾಳೆ ಆಗುತ್ತೆ ಎಂದು ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾಲಿಂಗನ ಹಟ್ಟಿ ಗ್ರಾಮದ ಜನರ ಗೋಳು ಕೇಳೋರು ಯಾರೂ ಇಲ್ವಾ? ಎನ್ನುವ ಪ್ರಶ್ನೆಗಳು ಇದೀಗ ಎದುರಾಗಿದೆ.
ಈ ಗ್ರಾಮದ ಜನರು ನೀರಿಗಾಗಿ ಗ್ರಾಮ ಪಂಚಾಯಿತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯಿತಿ ಕಚೇರಿಗೆ ನೀರಿಗಾಗಿ ಪ್ರತಿನಿತ್ಯ ಅಲೆದಾಟ ನಡೆಸುತ್ತಿದ್ದಾರೆ.
ಗ್ರಾಮದಲ್ಲಿ ಜಲಜೀವನ್ ಮನೆಮನೆ ಗಂಗೆ ಸಂಪೂರ್ಣ ವಿಫಲವಾಗಿದೆ. ಕಳೆದ ಒಂದು ವರ್ಷದಿಂದ ಪ್ರತಿನಿತ್ಯ ಈ ಗ್ರಾಮದ ಮಹಿಳೆಯರು ಸುಮಾರು ಒಂದೇ ಕಿಲೋಮೀಟರ್ ದೂರದಿಂದ ನೀರಿನ ತರುವಂತಾಗಿದೆ.
ಸುಮಾರು 25 ಮನೆಗಳ 300 ಕ್ಕೂ ಹೆಚ್ಚು ಜನರಿಗೆ ನೀರು ಕೊಡುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿಫಲವಾಗಿದ್ದಾರೆ.
ಎಲೆಕ್ಷನ್ ಬಂದಾಗ ಓಟು ಕೇಳಲು ಬರುವ ರಾಜಕೀಯದವರು ಈಗ ತಿರುಗಿಯು ನೋಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಪ್ರತಿನಿತ್ಯ ಗ್ರಾಮಸ್ಥರು ಶಾಪವನ್ನು ಹಾಕುತ್ತಿದ್ದಾರೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಧ್ಯಮದವರು ಕರೆ ಮಾಡಿ ಕೇಳಿದರೆ ಒಬ್ಬರ ಮೇಲೆ ಒಬ್ಬರು ಹೇಳುತ್ತಿದ್ದಾರೆ. ಈ ಜನರ ಸಮಸ್ಯೆಯನ್ನ ನೋಡಲಾಗದೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ತಮ್ಮ ಸ್ವಂತ ಹಣದಿಂದ ಆಗೊಮ್ಮೆ ಈಗೊಮ್ಮೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಮಳೆಗಾಲದಲ್ಲಿ ಎಲ್ಲಿಯಾದರೂ ಹಳ್ಳ ಕೊಳ್ಳಗಳಲ್ಲಿ ಜಾನುವಾರುಗಳು ನೀರನ್ನು ಕುಡಿಯುತ್ತವೆ. ಆದರೆ ಪ್ರತಿನಿತ್ಯ ಬಳಸುವ ನೀರಿಗೆ ಹಾಗೂ ಜನ ಜಾನುವಾರುಗಳಿಗೆ ನೀರಿಗಾಗಿ ಬಹಳ ಸಮಸ್ಯೆ ಆಗಿದೆ. ಬೇಸಿಗೆ ಬಂದಿದೆ ತುಂಬಾ ಸಮಸ್ಯೆ ಆಗುತ್ತದೆ. ಅದನ್ನ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಏನೇ ಆದರೂ ಗ್ರಾಮದ ಜನರಿಗೆ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೊಡುವುದು ಸಂಬಂಧಪಟ್ಟ ಇಲಾಖೆಗಳ ಆದ್ಯ ಕರ್ತವ್ಯ. ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನ ಹರಿಸಿ ಇನ್ನಾದರೂ ಜನರ ಸಮಸ್ಯೆ ಬಗೆಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4