ತುಮಕೂರು: ಡೀಮ್ಡ್ ಅರಣ್ಯ ಕುರಿತಂತೆ ನ್ಯಾಯಾಲಯಕ್ಕೆ 2022ರಲ್ಲಿ ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿರುವ ಎಲ್ಲ ಪರಿಭಾವಿತ ಅರಣ್ಯದ ಜಂಟಿ ಸರ್ವೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದರು
ಅವರು ತುಮಕೂರಿನಲ್ಲಿ ಹಾಸನ ವೃತ್ತದ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಬಾಕಿ ಇರುವ ಜಂಟಿ ಸರ್ವೆ ಪ್ರಕರಣಗಳನ್ನು ಕಂದಾಯ ಇಲಾಖೆಯ ಸಮನ್ವಯದೊಂದಿಗೆ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಹಾಗೂ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಇರುವ ಅರಣ್ಯ ಅಪರಾಧ, ಒತ್ತುವರಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಮತ್ತು ಈ ಸಂಬಂಧ ಸರ್ಕಾರಿ ವಕೀಲರಿಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕೆಂದರು.
ರಾಜ್ಯ ಸರ್ಕಾರ 2015ರಲ್ಲಿ ಕೈಗೊಂಡಿರುವ ತೀರ್ಮಾನಕ್ಕೆ ಬದ್ಧರಾಗಿ ಪಟ್ಟಾ ಜಮೀನು ಮತ್ತು ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಅರಣ್ಯ ಒತ್ತುವರಿ ಎರಡೂ ಸೇರಿ 3 ಎಕರೆಗಿಂತ ಕಡಿಮೆ ಇರುವ ಸಣ್ಣ ಒತ್ತುವರಿದಾರರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು, ಒತ್ತುವರಿ ತೆರವು ಗೊಳಿಸಿ ಎಂದು ಅರಣ್ಯ ಸಚಿವರು ಸೂಚನೆ ನೀಡಿದರು.
ಸಾಮಾಜಿಕ ಅರಣ್ಯ ಮತ್ತು ಪ್ರಾದೇಶಿಕ ಅರಣ್ಯ ವಿಭಾಗದಿಂದ ವನಮಹೋತ್ಸವದ ವೇಳೆ ಪ್ರತಿ ವಲಯದಲ್ಲಿ ಸಾವಿರಾರು ಸಸಿ ನೆಡಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಆದ್ದರಿಂದ ಈ ರೀತಿ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕಿ ಉಳಿದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇರಬೇಕು. ಸಸಿ ನೆಡುವ , ಹಸಿರು ಹೊದಿಕೆ ಹೆಚ್ಚಿಸುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಇಲ್ಲವಾದರೆ ಸಂಬಂಧಿತ ವಲಯ ಅರಣ್ಯಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4