ತುಮಕೂರು: ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ(Bird Flu) ದೃಢಪಟ್ಟಿರುವ ಬಗ್ಗೆ ವರದಿಯಾಗಿದ್ದು, ಜಿಲ್ಲೆಯಲ್ಲಿ ಈವರೆಗೂ ಹಕ್ಕಿಜ್ವರದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರದ ರೋಗೋದ್ರೇಕವಿರುವುದರಿಂದ ಶಿರಾ ತಾಲ್ಲೂಕು ಕಗ್ಗಲಡು ಗ್ರಾಮ ಸೇರಿದಂತೆ ಜಿಲ್ಲೆಯಲ್ಲಿ ವಲಸೆ ಪಕ್ಷಿಗಳು ಬರುವ ಸ್ಥಳದಲ್ಲಿ ನಿಗಾವಹಿಸಲಾಗಿದೆ. ಕೋಳಿಗಳು ಸತ್ತರೆ ಪಶುಪಾಲನಾ ಇಲಾಖೆ ಗಮನಕ್ಕೆ ತರಬೇಕೆಂದು ಜಿಲ್ಲೆಯ ಎಲ್ಲಾ ಕೋಳಿ ಫಾರಂ ಮಾಲೀಕರಿಗೆ ಸೂಚಿಸಲಾಗಿದೆ. ಹಳ್ಳಿಗಳಲ್ಲಿ ಕೋಳಿಗಳು ಸತ್ತರೆ ತಕ್ಷಣವೇ ಪ್ರಯೋಗಾಲಯಕ್ಕೆ ಕಳುಹಿಸಲು ಪಶುಪಾಲನಾ ಇಲಾಖೆಗೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಹಕ್ಕಿಜ್ವರ ನಿಯಂತ್ರಣ ಮಾಡಲು ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಅಧಿಕಾರಿ ಡಾ.ನಾಗಮಣಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (Rapid Response Team) ಹಾಗೂ ಒಬ್ಬ ಪಶುವೈದ್ಯ, ಇಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ ಇಬ್ಬರು ಡಿ ದರ್ಜೆ ನೌಕರರನ್ನೊಳಗೊಂಡ 64 ತಂಡಗಳನ್ನು ರಚಿಸಲಾಗಿದೆ.
ಜಿಲ್ಲೆಯಲ್ಲಿ ಹಕ್ಕಿಜ್ವರದ ರೋಗೋದ್ರೇಕ ಕಂಡು ಬಂದರೆ ಅವಶ್ಯಕತೆಯಿರುವ PPE Kits, ರಾಸಾಯನಿಕಗಳು ಲಭ್ಯವಿದ್ದು, ರೋಗವನ್ನು ನಿಯಂತ್ರಿಸಲು ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಕೋಳಿ ಶೀತಜ್ವರದ ಬಗ್ಗೆ ಆತಂಕ ಪಡಬೇಕಿಲ್ಲ. ಚೆನ್ನಾಗಿ ಬೇಯಿಸಿದ ಕೋಳಿ ಮಾಂಸವನ್ನು ಸೇವಿಸಬಹುದು ಎಂದು ಅವರು ತಿಳಿಸಿದ್ದಾರೆ.
ಕೋಳಿಗಳು ಅಸ್ವಾಭಾವಿಕವಾಗಿ ಮರಣ ಹೊಂದಿದರೆ 24/7 ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ಸಂಖ್ಯೆ 7304975519 ಅಥವಾ 0816-2213400ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಹಕ್ಕಿ ಜ್ವರವು Avian influenza (H5N1) ಎಂಬ ವೈರಸ್ಸಿನಿಂದ ಕೋಳಿ, ಬಾತು ಕೋಳಿ, ಪಕ್ಷಿಗಳಲ್ಲಿ ಬರುವಂತಹ ಮಾರಣಾಂತಿಕ ಖಾಯಿಲೆಯಾಗಿದೆ. ರೋಗಗ್ರಸ್ಥ ಕೋಳಿಗಳು ಆರೋಗ್ಯವಂತ ಕೋಳಿಗಳಿಗೆ ಗಂಟಲು ದ್ರವದ ಮೂಲಕ ಮತ್ತು ಹಿಕ್ಕೆಯಿಂದ ವೈರಸ್ಸನ್ನು ಹರಡುತ್ತದೆ. ಇಲ್ಲಿಯವರೆಗೂ ಭಾರತದಲ್ಲಿ ಈ ಖಾಯಿಲೆ ಮನುಷ್ಯರಲ್ಲಿ ಕಂಡು ಬಂದಿರುವ ಉದಾಹರಣೆಗಳಿಲ್ಲ. ಜಿಲ್ಲೆಯಲ್ಲಿ 20ನೇ ಜಾನುವಾರುಗಣತಿ ಪ್ರಕಾರ 40,28,178 ಕೋಳಿ, 687 ಕೋಳಿ ಫಾರಂಗಳಿವೆ ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ(ಆಡಳಿತ) ಡಾ.ಜಿ.ಗಿರೀಶ್ ಬಾಬುರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4