ಬೆಂಗಳೂರು: ವಿಧಾನಸಭೆ ಕಾರ್ಯಕಲಾಪಗಳ ನೇರಪ್ರಸಾರದಲ್ಲಿ ಪ್ರತಿಪಕ್ಷಗಳ ಶಾಸಕರು ಮಾತನಾಡುವ ವಿಚಾರ ಪ್ರಸ್ತಾಪವಾಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಮಾಡಿದ್ದು, ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಸದನವನ್ನು 10 ನಿಮಿಷ ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿ ಜರುಗಿತು.
ವಿರೋಧಪಕ್ಷದ ನಾಯಕ ಆರ್.ಅಶೋಕ್ರವರು ಕೆಪಿಎಸ್ಸಿ ನೇಮಕಾತಿ ವಿಚಾರ ಕುರಿತು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಲು ಎದ್ದುನಿಂತರು.
ಆ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಸದನದಲ್ಲಿನ ಕಾರ್ಯಕಲಾಪಗಳು ನೇರ ಪ್ರಸಾರವಾಗುತ್ತಿವೆ. ಆದರೆ ನಮ ನಾಯಕರು ಮಾತನಾಡುವ ವಿಚಾರ ಸದನದ ಸಭಾಂಗಣದಲ್ಲಿ ಅಳವಡಿಸಿರುವ ಟಿವಿಗಳಲ್ಲಿ ಬರುತ್ತಿಲ್ಲ. ನೀವು ಪ್ರಸಾರ ಮಾಡದಂತೆ ಸೂಚನೆ ಕೊಟ್ಟಿದ್ದೀರ. ಈ ವಿಚಾರವನ್ನು ನಾವು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆವು ಎಂದು ಹೇಳಿದರು.
ಅಲ್ಲದೆ ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸದನದ ಕಾರ್ಯಕಲಾಪಗಳ ನೇರ ಪ್ರಸಾರ ಮಾಡುತ್ತಿತ್ತು. ಈಗ ಅದನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಏಕೆ ಕೊಟ್ಟಿದ್ದೀರಿ?, ಅಲ್ಲದೆ ಕೆಲ ಸಚಿವರು ಅನಾವಶ್ಯಕವಾಗಿ ಎದ್ದು ನಿಲ್ಲುತ್ತಾರೆ. ಅದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಸುನಿಲ್ಕುಮಾರ್ ಮಾತನಾಡಿ, ಯಾವ ನಟ್ಟು, ಬೋಲ್ಟು ಲೂಸ್ ಆಗಿದೆ ಹೇಳಿ. ಅದನ್ನು ಸರಿಪಡಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.
ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವಿನ ಮಾತಿನ ಚಕಮಕಿ, ಆರೋಪ ಮತ್ತು ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿತು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ತಾಂತ್ರಿಕ ಸಮಸ್ಯೆಯಾಗಿರಬೇಕು. ಅದನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದರು. ಅಷ್ಟಕ್ಕೇ ಸುಮನಾಗದ ಬಿಜೆಪಿ ಶಾಸಕರು ಎದ್ದುನಿಂತು ಮಾತನಾಡುತ್ತಿದ್ದರು. ಪ್ರತಿಯಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಹೀಗಾಗಿ ಸದನವನ್ನು 10 ನಿಮಿಷ ಮುಂದೂಡೋಣ, ತಾಂತ್ರಿಕ ಸಮಸ್ಯೆ ಏನಾಗಿದೆ ಎಂಬುದನ್ನು ತಂತ್ರಜ್ಞರೊಂದಿಗೆ ಚರ್ಚಿಸಿ ಸರಿಪಡಿಸೋಣ, ನೀವೂ ಬನ್ನಿ ಎಂದು ಆಕ್ಷೇಪಿಸಿ ಕಲಾಪವನ್ನು 10 ನಿಮಿಷ ಮುಂದೂಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4