ತುಮಕೂರು: ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಕೆರೆಯಲ್ಲಿ ಪ್ರಸ್ತುತ 204 ಎಂ.ಸಿ.ಎಫ್.ಟಿ ನೀರು ಲಭ್ಯವಿದ್ದು, ಲಭ್ಯವಿರುವ ನೀರನ್ನು ಬೇಸಿಗೆ ಅಂತ್ಯದವರೆಗೂ ಸರಬರಾಜು ಮಾಡಬೇಕಾಗಿರುವುದರಿಂದ ನಾಗರಿಕರು ನೀರಿನ್ನು ಮಿತವಾಗಿ ಬಳಕೆ ಮಾಡಬೇಕೆಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮನವಿ ಮಾಡಿದರು.
ನಗರಕ್ಕೆ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, 363 ಎಂ.ಸಿ.ಎಫ್.ಟಿ. ಸಾಮರ್ಥ್ಯದ ಬುಗುಡನಹಳ್ಳಿ ಕೆರೆಯಲ್ಲಿ ಲಭ್ಯವಿರುವ 204 ಎಂ.ಸಿ.ಎಫ್.ಟಿ. ನೀರನ್ನು ಜೂನ್ ಅಂತ್ಯದವರಗೆ ನಗರಕ್ಕೆ ನೀರು ಸರಬರಾಜು ಮಾಡಬಹುದಾಗಿದೆ. ನೀರಿನ ಸಮಸ್ಯೆ ತಲೆದೋರದಂತೆ ಕೊಳವೆಬಾವಿಗಳ ಮೂಲಕವೂ ನಾಗರಿಕರಿಗೆ ನೀರು ಸರಬರಾಜು ಮಾಡಲು ಕ್ರಮವಹಿಸಲಾಗಿದೆ.
ನಗರಕ್ಕೆ ನೀರು ಸರಬರಾಜು ಮಾಡುವ ಎಲ್ಲಾ ಜಲಶುದ್ಧೀಕರಣ ಘಟಕ, ಜ್ಯಾಕ್ ವೆಲ್ ಹಾಗೂ ಪಂಪ್‌ಹೌಸ್‌ಗಳ ಪರಿವೀಕ್ಷಣೆ ನಡೆಸಲಾಗಿದೆ. ಪಂಪ್–ಮೋಟಾರ್‌ಗಳು ಸುಸ್ಥಿತಿಯಲ್ಲಿದ್ದು, ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲಾಗಿದೆ.
ಪಾಲಿಕೆಗೆ ಸಂಬಂಧಿಸಿದ 4 ವಾಟರ್ ಟ್ಯಾಂಕರ್‌ಗಳಿದ್ದು ಅವಶ್ಯವಿರುವ ಕಡೆ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಟ್ಯಾಂಕರ್‌ಗಳನ್ನು ಉಪಯೋಗಿಸಲಾಗುತ್ತಿದೆ. ವಾರ್ಡ್ವಾರು ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಅಗತ್ಯವಾದ ಸಾಮಗ್ರಿಗಳನ್ನು ಹಾಗೂ ನೀರು ಶುದ್ಧೀಕರಿಸಲು ಅಗತ್ಯವಾದ ರಾಸಾಯನಿಕಗಳನ್ನು ದಾಸ್ತಾನು ಶಾಖೆಗೆ ಸರಬರಾಜು ಪಡೆಯಲು ಕ್ರಮವಹಿಸಲಾಗಿದೆ.
ವಾರ್ಡ್ವಾರು ಸಿಲ್ಟ್ನಿಂದ ಮುಚ್ಚಿಕೊಂಡಿರುವ ಕೊಳವೆ ಬಾವಿಗಳನ್ನು ಗುರುತಿಸಿ ಫ್ಲಶಿಂಗ್ ಹಾಗೂ ಹೊಸದಾಗಿ ಕೇಸಿಂಗ್ ಪೈಪ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ವಾರ್ಡ್ಗಳ ವ್ಯಾಪ್ತಿಯಲ್ಲಿರುವ ಪೈಪ್‌ಲೈನ್ ಹಾಗೂ ಮುಖ್ಯ ಪೈಪ್‌ಲೈನ್ ಜಾಲಗಳನ್ನು ಪರಿಶೀಲಿಸಿ ಲೀಕೇಜ್‌ಗಳಿದ್ದಲ್ಲಿ ಸರಿಪಡಿಸಿ ನೀರು ಪೋಲಾಗುವುದನ್ನು ತಡೆಯಲಾಗಿದೆ ಎಂದು ಅವರು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4