( ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆ ನೆನಪಿಗಾಗಿ)
ವಿಶ್ವದ ಅತಿ ಹೆಚ್ಚು ದೇಶಗಳು ಕ್ರಿಶ್ಚಿಯನ್ ಧರ್ಮಿಯ ಸಮುದಾಯಗಳನ್ನು ಹೊಂದಿವೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಕೂಡ ಕ್ರಿಶ್ಚಿಯನ್ನರು. ವಿಶ್ವದಲ್ಲಿ 200 ಕೋಟಿ ಕ್ರಿಶ್ಚಿಯನ್ನರು ಇರುವ ಅಂದಾಜಿದೆ. ಹಾಗೆಯೇ ವಿಶ್ವದ 150 ದೇಶಗಳು ಕ್ರಿಶ್ಚಿಯನ್ ಧರ್ಮೀಯ ರಾಷ್ಟ್ರಗಳಾಗಿವೆ. ದಿನಾಂಕ 7-3-1804ರಂದು ಥಾಮಸ್ ಚಾರ್ಲ್ಸ್ , ವಿಲಿಯಂ ವಿಲ್ಟರ್ ಫೋರ್ಸ್ ಮತ್ತು ಅವರ ತಂಡದವರು ಸೇರಿ ಇಂಗ್ಲೆಂಡ್ ನಲ್ಲಿ “British & Foreigne Bible Society @ Bible Society” ಎಂಬ ಈ ಸಂಸ್ಥೆಯನ್ನು ಸ್ಥಾಪಿಸಿದರು. ಜಾತ್ಯತೀತ ಭಾರತ ದೇಶವನ್ನು ಒಳಗೊಂಡಂತೆ 150ಕ್ಕೂ ಹೆಚ್ಚು ದೇಶಗಳಲ್ಲಿ ಈ “ಬೈಬಲ್ ಸೊಸೈಟಿ’ ಅಸ್ತಿತ್ವದಲ್ಲಿದೆ. ಸುಮಾರು 18ನೇ ಶತಮಾನದಿಂದ ಸತತವಾಗಿ, ಲಾಭರಹಿತ ಸಂಸ್ಥೆಯಾಗಿ, ಕ್ರಿಶ್ಚಿಯನ್ ಧರ್ಮಿಯರ ‘ಧರ್ಮಗ್ರಂಥ’ ವಾಗಿರುವ “ಬೈಬಲ್” ಅನ್ನು ಶ್ರೀಸಾಮಾನ್ಯ ಜನರ ಕೈಗೆಟುಕುವ ಬೆಲೆಯಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಪುಕ್ಕಟೆಯಾಗಿ ಮತ್ತು ವಿಶ್ವದ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಭಾಷಾಂತರ, ಮುದ್ರಣ, ಪ್ರಕಟಣೆ, ಮಾರಾಟ, ವಿತರಣೆ ಮಾಡುವ ಕಾರ್ಯವನ್ನು ಈ “ಬೈಬಲ್ ಸೊಸೈಟಿ” ಮಾಡುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಉದ್ಯೋಗಿಗಳು ಜೀಸಸ್ ಸೇವಕರಾಗಿ ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ “ಬೈಬಲ್” ಧರ್ಮಗ್ರಂಥದ ಮುದ್ರಣ ಮತ್ತು ಓದುವಿಕೆ ವಿಶ್ವದಲ್ಲಿಯೇ ಅತಿ ಹೆಚ್ಚು. ಇಂತಹ ಮಹತ್ ಕಾರ್ಯ ನಿರ್ವಹಿಸುತ್ತಿರುವ ವಿಶ್ವದ ವಿಶ್ವಾಸಾರ್ಹತೆಯ “ಬೈಬಲ್ ಸೊಸೈಟಿ” ಸ್ಥಾಪನೆಯ ಹಿಂದೆ ಜೀಸಸ್ ಯೇಸು ಅನುಯಾಯಿ ಒಬ್ಬಳ ಭಕ್ತಿ ಕತೆ ಇದೆ. ಆ ಭಕ್ತಯೆ “ಮೇರಿಜೋನ್ಸ್” .
ಯುರೋಪ್ ಖಂಡದ ಇಂಗ್ಲೆಂಡ್ ದೇಶದ ವಾಲಸ್ ಪ್ರಾಂತ್ಯದ llanfihangal ನಗರದಲ್ಲಿ ನೇಕಾರ ವೃತ್ತಿ ಮಾಡುತ್ತಿದ್ದ ತಂದೆ ಜಾಕೋಬ್ ಜೋನ್ಸ್, ತಾಯಿ ಮೇರಿ ಜೋನ್ಸ್ ಈ ದಂಪತಿಗಳಿಗೆ ದಿನಾಂಕ:16-12-1784ರಲ್ಲಿ ಜನಿಸಿದ ಹೆಣ್ಣು ಮಗುವೇ “ಮೇರಿ ಜೋನ್ಸ್”. (ಮಗು ಹೆಸರು ಕೂಡ ತಾಯಿಯ ಹೆಸರೇ) ಈ ಜನನ ವೇಳೆಯಲ್ಲಿ ಕುಟುಂಬದಲ್ಲಿ ಬಡತನವಿತ್ತು. ಜೀಸಸ್ ಯೇಸು ಪ್ರಾರ್ಥನೆ, ಭಕ್ತಿ, ಮನೆಯಲ್ಲಿ ತುಂಬಿತ್ತು. ಶೈಶಾವಸ್ತೆಯಿಂದ ಬಾಲ್ಯವಸ್ಥೆಗೆ ಮೇರಿ ಜೋನ್ಸ್ ಬೆಳೆದಳು. ಸುಮಾರು 8 ವರ್ಷ ಇರಬಹುದು, ಆ ವೇಳೆಗೆ ಮನೆಯಲ್ಲಿನ ಬಡತನಕ್ಕಾಗಿ ಕೋಳಿ ಸಾಕಾಣಿಕೆಯನ್ನು ಮನೆಯಲ್ಲಿ ಮಾಡಲಾಗುತ್ತಿತ್ತು. ಮನೆ ಅಂಗಳದಲ್ಲಿ ಕೋಳಿಗಳು ಇಡುತ್ತಿದ್ದ ಮೊಟ್ಟೆಗಳನ್ನು ಆಯ್ದು ತರುವ ಕಾರ್ಯವನ್ನು ಮೇರಿ ಜೋನ್ಸ್ ಮಾಡಲು ಪ್ರಾರಂಭಿಸಿದಳು. ಪ್ರತಿ ಭಾನುವಾರ ತಪ್ಪದೇ ತಂದೆ ತಾಯಿ ಜೊತೆ ಸ್ಥಳೀಯ ಚರ್ಚ್ ಗೆ ತೆರಳಿ ಜೀಸಸ್ ಯೇಸು ಬಗ್ಗೆ ಹಾಡುಗಳನ್ನು ಹೇಳುತ್ತಿದ್ದಳು ಮತ್ತು ಪಾಸ್ಟರ್ ಹೇಳುತ್ತಿದ್ದ ಬೈಬಲ್ ನ ಸತ್ಯ ವಾಕ್ಯಗಳನ್ನು ಕೇಳುತ್ತಿದ್ದಳು. ಜೀಸಸ್ ಯೇಸುವಿನ ಸತ್ಯ ವಾಕ್ಯಗಳ ಬಗ್ಗೆ ಪರವಶಳಾದಳು. ಮನೆಗೆ ಹಿಂತಿರುಗಿದಾಗ ಕೂಡ ಯೇಸುವಿನ ಸತ್ಯವಾಕ್ಯಗಳ ಬಗ್ಗೆ ತಂದೆ-ತಾಯಿರಲ್ಲಿ ಚರ್ಚಿಸುತ್ತಿದ್ದಳು. ಪ್ರತಿದಿನ ಮನೆಯಲ್ಲಿಯೇ ಯೇಸುವಿನ ಬಗ್ಗೆ ಪ್ರಾರ್ಥನೆ ಮಾಡುತ್ತಿದ್ದಳು.
ಒಮ್ಮೆ ಮೊಟ್ಟೆ ಕೊಳ್ಳುವ ಸಲುವಾಗಿ ಮಿಸ್ ಎಫೆಸ್ ಎಂಬ ಮಹಿಳೆ ಬಂದಳು. ಮೊಟ್ಟೆ ಖರೀದಿ ಮಾಡುವಾಗ ಮೇರಿ ಜೋನ್ಸ್ ಜೀಸಸ್ ಯೇಸುವಿನ ಸತ್ಯ ವಾಕ್ಯಗಳನ್ನು ಹೇಳುತ್ತಿದ್ದನ್ನು ಗಮನಿಸಿದಳು. ನಿನಗೆ ಆಸಕ್ತಿ ಇದ್ದಲ್ಲಿ ನನ್ನ ಮನೆಗೆ ಬಾ, ನನ್ನ ಮನೆಯಲ್ಲಿ “ಬೈಬಲ್” ಇದೆ, ಅದನ್ನು ಓದು ಎಂದು ಹೇಳಿದಳು. ಮನೆಯಲ್ಲಿನ ಬಡತನ ಕಾರಣಕ್ಕೆ ನನಗೆ ಇನ್ನೂ ಶಾಲೆಗೆ ಸೇರಿಸಿಲ್ಲ. ಮುಂದೆ ವಿದ್ಯಾಭ್ಯಾಸ ಮಾಡಿ ನಂತರ ನಿಮ್ಮ ಮನೆಗೆ ಬಂದು ಬೈಬಲ್ ಓದುತ್ತೇನೆ ಎಂದು ಮೇರಿ ಜೋನ್ಸ್ ಮೊಟ್ಟೆ ಖರೀದಿ ಮಾಡಲು ಬಂದಿದ್ದ ಆ ಮಹಿಳೆಗೆ ತಿಳಿಸಿದಳು.
ಮೇರಿ ಜೋನ್ಸ್ ಗೆ ಸುಮಾರು 10 ವರ್ಷ ಇರಬಹುದು. ಆ ವೇಳೆಗೆ ಮನೆಯ ಆರ್ಥಿಕ ಸ್ಥಿತಿ ಉತ್ತಮ ಗೊಂಡಿತ್ತು. ಆ ವೇಳೆಗೆ, ವಿದ್ಯಾಭ್ಯಾಸಕ್ಕೆ ಅವರ ಮನೆಯಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿದ್ದ ಶಾಲೆಗೆ ಮೇರಿ ಜೋನ್ಸ್ ಳನ್ನು ಸೇರ್ಪಡೆ ಮಾಡಿದರು. ಪ್ರತಿದಿನವೂ ತಪ್ಪದೇ ನಡೆದು ಶಾಲೆಗೆ ಹೋಗಿ ಬರುತ್ತಿದ್ದಳು. ಶಾಲೆಯಲ್ಲಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವನ್ನು ಬೇಗ ಕಲಿತಳು. ಜೊತೆಗೆ ಶಾಲೆಯಿಂದ ಮನೆಗೆ ಬಂದ ಕೂಡಲೇ ಮಿಸ್ ಎಫೆಸ್ ಅವರ ಮನೆಗೆ ತೆರಳಿ ಬೈಬಲನ್ನು ಓದುತ್ತಿದ್ದಳು. ಬಾಲ್ಯಾವಸ್ಥೆ ಇದ್ದರೂ ಮೇರಿ ಜೋನ್ಸ್ ಲಿಗೆ ತಿಳುವಳಿಕೆ, ಜ್ಞಾನ ಬರತೊಡಗಿತ್ತು. ಪ್ರತಿದಿನ ಕಂಡವರ ಮನೆಗೆ ಬಂದು ಬೈಬಲ್ ಓದುವುದು, ಇದರಿಂದ ಅವರ ವೈಯಕ್ತಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಅರಿತಳು. ತನ್ನ ತಂದೆ ತಾಯಿಯ ಮುಂದೆ ನನಗೆ “ಬೈಬಲ್” ಕೊಡಿಸುವಂತೆ ಕೇಳಿಕೊಂಡಳು. ಬಡತನ ಕಾರಣಕ್ಕೆ ಖರೀದಿಸಲು ಕಷ್ಟವಿದೆ ಎಂದು ತಂದೆ ತಾಯಿಗಳು ತಿಳಿಸಿದರು. ಮನೆಯ ಸ್ಥಿತಿ ಅರಿತ ಮೇರಿ ಜೋನ್ಸ್ , ಜೀಸಸ್ ಯೇಸುವಿನ ಸತ್ಯವಾಕ್ಯಗಳನ್ನು ತಿಳಿಯಲೇಬೇಕು, ಅದಕ್ಕಾಗಿ ಬೈಬಲನ್ನು ಓದಲೇಬೇಕೆಂದು ಹಠಕ್ಕೆ ಬಿದ್ದಳು. ಅದಕ್ಕಾಗಿ ಶಾಲೆಯ ರಜೆ ದಿನ, ಬಿಡುವಿನಲ್ಲಿ ಸ್ಥಳೀಯ ಅರಣ್ಯ , ಕಾಡುಗಳಿಗೆ ಹೋಗಿ ಒಣಗಿದ ಸೌದೆ ಕಡಿದು, ತಲೆ ಮೇಲೆ ಹೊತ್ತು ತಂದು ಮಾರಾಟ ಮಾಡಲು ಪ್ರಾರಂಭಿಸಿದಳು. ಹೀಗೆ ಬೈಬಲ್ ಧರ್ಮಗ್ರಂಥ ಪುಸ್ತಕದ ಖರೀದಿಗೆ ಹಣ ಜೋಡಿಸಿಕೊಂಡಳು.
ಬೈಬಲ್ ಪುಸ್ತಕ ಖರೀದಿಗಾಗಿ ಹಣ ಜೋಡಿಸಿ ಕೊಂಡಿರುವುದನ್ನು ತಿಳಿಸಿ, ಮಾರಾಟದ ಸ್ಥಳವನ್ನು ತಂದೆಯಲ್ಲಿ ಕೇಳಿದಳು. ತಂದೆ ಸ್ಥಳೀಯ ಚರ್ಚ್ ನ ಫಾಸ್ಟರ್ ಬಳಿ ಕರೆದೊಯ್ದರು. ಇಲ್ಲಿಂದ 40 ಕಿಲೋಮೀಟರ್ ದೂರದಲ್ಲಿರುವ ಬಾಲ ಎಂಬ ಸ್ಥಳದಲ್ಲಿ ಥಾಮಸ್ ಚಾರ್ಲ್ಸ್ ವ್ಯಕ್ತಿ ಮಾರಾಟ ಮಾಡುತ್ತಾನೆ. ಖರೀದಿ ಮುನ್ನ ಆ ಊರಿನ ಎಡ್ವರ್ಡ್ ವಿಲಿಯಮ್ಸ್ ಎಂಬ ವ್ಯಕ್ತಿ ಮೂಲಕ ಆ ಮಾರಾಟಗಾರನ ಬಳಿ ಹೋಗಿ ಬೈಬಲ್ ಖರೀದಿಸಿ ಎಂದು ಪಾಸ್ಟರ್ ಹೇಳಿದನು. ಬೈಬಲ್ ಪುಸ್ತಕದ ಬೆಲೆ ಗೊತ್ತಿಲ್ಲ. ಜೋಡಿಸಿಕೊಂಡಿರುವ ಹಣ ಖರೀದಿಗೆ ಆಗಬಹುದು ಪ್ರಯಾಣಕ್ಕೆ ಬಳಸಿದರೆ ಪುಸ್ತಕ ಖರೀದಿಗೆ ತೊಂದರೆ ಆಗಬಹುದು ಎಂದು ರಾತ್ರಿ ಎಲ್ಲಾ ಮೇರಿ ಜೋನ್ಸ್ ಯೋಚಿಸಿದಳು. ಬಾಲ ನಗರಕ್ಕೆ ತೆರಳುವ ಮಾರ್ಗದ ಮಾಹಿತಿಯನ್ನು ತಂದೆಯಲ್ಲಿ ಪಡೆದಳು. ಸೂರ್ಯ ಉದಯಿಸುವ ಮುನ್ನವೇ ಎದ್ದು, ಕಾಲ್ ನಡಿಗೆ ಮೂಲಕ ಮನೆಯಿಂದ ಬಾಲ ನಗರಕ್ಕೆ ಪಯಣ ಪ್ರಾರಂಭಿಸಿದಳು. ಕಾಲಿನಲ್ಲಿ ಚಪ್ಪಲಿ ಇಲ್ಲ. ರಸ್ತೆ ಜಲ್ಲಿಕಲ್ಲಿನದು, ರಸ್ತೆ, ಗುಡ್ಡ ಕಾಡುಗಳಲ್ಲಿ ಪಯಣ ಸಾಗುತ್ತಿತ್ತು. ಕಾಡು ಮೃಗಗಳ, ಪ್ರಾಣಿ-ಪಕ್ಷಿಗಳ ಸದ್ದು ಕಾಡಿನೊಳಗಿಂದ ಬರುತ್ತಿತ್ತು. ಜಲ್ಲಿಕಲ್ಲುಗಳು ಕಾಲಿಗೆ ಒಕ್ಕಿ ಕಾಲಿನಲ್ಲಿ ರಕ್ತ ಸುರಿಯುತ್ತಿತ್ತು, ಕಾಡು ಪ್ರಾಣಿಗಳ ಸದ್ದು ಭಯ ಹುಟ್ಟಿಸುತ್ತಿತ್ತು. ರಣ ಬಿಸಿಲು ದೇಹಕ್ಕೆ ತ್ರಣ ನೀಡುತ್ತಿತ್ತು. ಇಷ್ಟಾಗಿಯೂ, ದೇವರ ವಾಕ್ಯಗಳ ಧರ್ಮಗ್ರಂಥ ಬೈಬಲನ್ನು ಖರೀದಿ ಮಾಡಲೇಬೇಕೆಂದು ಪಯಣ ಮುಂದುವರಿಸಿದಳು, ರಾತ್ರಿ ವೇಳೆಗೆ ಬಾಲ ಸ್ಥಳವನ್ನು ತಲುಪಿದಳು. ಪಾಸ್ಟರ್ ಸಲಹೆಯಂತೆ ಮೊದಲು ಎಡ್ವರ್ಡ್ ವಿಲಿಯಮ್ಸ್ ಭೇಟಿಯಾದಳು. ಮೇರಿ ಜೋನ್ಸ್ ಆಯಾಸ, ಸ್ಥಿತಿ ಗಮನಿಸಿದ ಎಡ್ವರ್ಡ್ ವಿಲಿಯಮ್ಸ್ ರಾತ್ರಿ ಆಗಿದೆ, ಈಗ ಇಲ್ಲಿ ನಿದ್ರೆ ಮಾಡಿ. ಬೆಳಗ್ಗೆ ನಿಮ್ಮನ್ನು ಬೈಬಲ್ ಪುಸ್ತಕ ಮಾರಾಟ ಸ್ಥಳಕ್ಕೆ ಕರೆದೊಯ್ಯುತ್ತೇನೆಂದನು. ಅದರಂತೆ ಅಲ್ಲಿ ವಾಸ್ತವ್ಯ ಮಾಡಿದಳು. ಬೆಳಿಗ್ಗೆ ಎದ್ದು ಎಡ್ವರ್ಡ್ ವಿಲಿಯಮ್ಸ್ ಜೊತೆ ಮಾರಾಟ ಸ್ಥಳಕ್ಕೆ ಮೇರಿ ಜೋನ್ಸ್ ಹೊರಟಳು.
ಬಾಲ ನಗರದಲ್ಲಿ ಥಾಮಸ್ ಚಾರ್ಲ್ಸ್, ಬೈಬಲ್ ಪುಸ್ತಕಗಳ ಮಾರಾಟ ಮಾಡುವ ಏಕೈಕ ವ್ಯಕ್ತಿಯಾಗಿದ್ದ. ಬೈಬಲ್ ಪುಸ್ತಕಗಳ ಸ್ಟಾಕ್ ಕಡಿಮೆ ಇದೆ. ಕೇವಲ 3 ಪುಸ್ತಕಗಳು ಉಳಿದಿವೆ. ಈ ಪುಸ್ತಕಗಳನ್ನು ಕೂಡ ಈಗಾಗಲೇ ಬೇರೆಯವರು ಮುಂಗಡ ನೀಡಿ ಕಾದರಿಸಿದ್ದಾರೆ. ಮುಂದೆ ಪುಸ್ತಕ ಸರಬರಾಜು ಆದಾಗ ನೀವು ಖರೀದಿಸಬಹುದು ಎಂದು ಥಾಮಸ್ ಚಾರ್ಲ್ಸ್ ತಿಳಿಸಿದನು. ಇದನ್ನು ಕೇಳಿದ ಮೇರಿ ಜೋನ್ಸ್ ಕುಸಿದು ನೆಲಕ್ಕೆ ಬಿದ್ದಳು. ದೇವರ ವಾಕ್ಯಗಳನ್ನು ಓದುವ ಹಿಂಗಿತವನ್ನು , ಅದಕ್ಕಾಗಿ ಬಡತನವಿದ್ದರೂ ಪಟ್ಟ ಶ್ರಮವನ್ನು ತಿಳಿಸಿದಳು. ಬಿಕ್ಕಳಿಸಿ ಬಿಕ್ಕಳಿಸಿ ಅಳಲು ಪ್ರಾರಂಭಿಸಿದಳು. ಮೇರಿ ಜೋನ್ಸ್ ಸ್ಥಿತಿ, ಆಸಕ್ತಿ ಗಮನಿಸಿದ ಥಾಮಸ್ ಚಾರ್ಲ್ಸ್ ಗೆ ಕರುಣೆ ಬಂದು, 3 ಬೈಬಲ್ ಪುಸ್ತಕಗಳಲ್ಲಿ ಒಂದನ್ನು ಮೇರಿ ಜೋನ್ಸಳಿಗೆ ನೀಡಿದನು. ಬೈಬಲ್ ಪುಸ್ತಕ ಪಡೆದಾಗ, ಅ ಬೈಬಲ್ ಪುಸ್ತಕಕ್ಕೆ ಮೇರಿ ಜೋನ್ಸ್ ಮುತ್ತುಗಳ ಸುರಿಮಳೆ ಗೈದಳು, ಅವಳ ಕಣ್ಣಿನಿಂದ ಕಣ್ಣೀರು ಬೈಬಲ್ ಪುಸ್ತಕದ ಮೇಲೆ ಬೀಳುತ್ತಿತ್ತು. ತನ್ನ ಎದೆಗೆ ಆ ಪುಸ್ತಕವನ್ನು ಅಪ್ಪಿಕೊಂಡಳು. ಅವಳ ಸಂತೋಷ ವರ್ಣಿಸಲು ಅಸಾಧ್ಯ. ತರುವಾಯ, ಮೇರಿ ಜೋನ್ಸ್ ಸಂತಸದಿಂದ ತನ್ನ ಊರಿಗೆ ಹಿಂದಿರುಗಿದಳು.
ಇತ್ತ ಥಾಮಸ್ ಚಾರ್ಲ್ಸ್ ಈ ಘಟನೆಯನ್ನು ಇಂಗ್ಲೆಂಡಿನ ಬಹುತೇಕ ಧನಿಕರಲ್ಲಿ , ಚರ್ಚ್ ಗಳಲ್ಲಿ ಚರ್ಚಿಸಿದನು. ವಿಶ್ವದ ಬಡವರು ಕೂಡ ಈ ದೇವರ ವಾಕ್ಯಗಳ ಧರ್ಮಗ್ರಂಥವಾಗಿರುವ ಬೈಬಲನ್ನು ಓದಬೇಕಿದೆ. ಈ ಬೈಬಲ್ ಪುಸ್ತಕ ವಿಶ್ವದ ಎಲ್ಲಾ ಬಡವರಿಗು ಸಿಗುವಂತೆ ಮಾಡಬೇಕಿದೆ. ಅದಕ್ಕಾಗಿ ನಾವು ಒಂದು ಸಂಸ್ಥೆ ಸ್ಥಾಪಿಸಬೇಕಿದೆ ಎಂದು ಬಹುತೇಕ ಸಮಾನ ಮನಷ್ಕರಲ್ಲಿ ಮಾತನಾಡಿ ಸುಮಾರು 700 ಪೌಂಡ್ ಹಣ ಸಂಗ್ರಹ ಮಾಡಿದನು. ಸ್ನೇಹಿತರ ಜೊತೆಗೂಡಿ ದಿನಾಂಕ:7-3-1804 ರಂದು British & Foreigne Bible Society @ Bible Society ಸ್ಥಾಪಿಸಿದರು. ಅಂದಿನಿಂದ ಈ ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿ, ಬೈಬಲ್ ಪುಸ್ತಕವನ್ನು ವಿಶ್ವದ ಎಲ್ಲಾ ಭಾಷೆಗಳಿಗೆ ಭಾಷಾಂತರಿಸುವ, ಮುದ್ರಿಸುವ, ಮಾರಾಟ ಮತ್ತು ಪುಕ್ಕಟೆಯಾಗಿ ನೀಡುವ ಕಾರ್ಯವನ್ನು ಮಾಡುತ್ತಿದೆ ಮತ್ತು ಮುಂದುವರಿಸಿದೆ.
ಇಂದಿಗೂ “ಬೈಬಲ್ ಸೊಸೈಟಿ” ವಿಶ್ವದ ವಿಶ್ವಾಸಾರ್ಹತೆಯ ಸಂಸ್ಥೆಯಾಗಿ ಉಳಿದಿದೆ. ಲಕ್ಷಾಂತರ ಜೀಸಸ್ ಯೇಸು ಅನುಯಾಯಿಗಳು ವಿಶ್ವದೆಲ್ಲೆಡೆ ಈ ಸಂಸ್ಥೆಯಲ್ಲಿ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದ ಕೋಟ್ಯಾಂತರ ಜನ ಆ ಬೈಬಲ್ ಪುಸ್ತಕವನ್ನು ಓದಿದ್ದಾರೆ. ಇಂತಹ ಸೇವೆಯ ಸಂಸ್ಥೆ ಸ್ಥಾಪನೆ ಹಿಂದೆ ಮಹಿಳೆಯೊಬ್ಬಳ ಪ್ರೇರಣೆಯ ಕಥೆ ಇರುವುದನ್ನು, “ಅಂತರಾಷ್ಟ್ರೀಯ ಮಹಿಳಾ ದಿನ” ವಾದ ಇಂದು ನೆನಪು ಮಾಡುವ ಸಲುವಾಗಿ ಈ ಲೇಖನವನ್ನು ನಿಮಗಾಗಿ ಬರೆದಿದ್ದೇನೆ. ಸ್ವೀಕರಿಸಿ.
ಎಸ್. ಮೂರ್ತಿ, ಮಾಜಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4