ತುಮಕೂರು: ಸಮಾಜದಲ್ಲಿ ಸ್ತ್ರೀಯರು ವೃತ್ತಿ ಕೌಶಲ್ಯಗಳನ್ನು ಬೆಳಸಿಕೊಂಡು ಎಲ್ಲಾ ವಿಷಯಗಳ ಸಮಗ್ರ ಅಧ್ಯಯನ ಮಾಡಬೇಕೆಂದು ಶ್ರೀ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಶಾಲಿನಿ ಎಂ. ಕರೆ ನೀಡಿದರು.
ನೆಹರು ಯುವ ಕೇಂದ್ರ, ತಿಪಟೂರಿನ ಡಾ.ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಔಷಧ ಮಹಾವಿದ್ಯಾಲಯದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ತ್ರೀಯರು ಪೂರ್ಣ ಪ್ರಮಾಣದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಾಗಲೀ ದೂರದೃಷ್ಠಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನೆಹರು ಯುವ ಕೇಂದ್ರದ ಕಾರ್ಯಕ್ರಮ ಅಧಿಕಾರಿ ರಾಜಶೇಖರ್ ಕೆ ಮಾತನಾಡಿ, ಪೌಷ್ಠಿಕ ಆಹಾರವನ್ನು ಸೇವಿಸಿ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಹರಿಸಬೇಕು. ಮಹಿಳೆಯರು ಬೇರೆಯವರಿಂದ ಏನನ್ನೂ ನಿರೀಕ್ಷಿಸದೇ ತಮ್ಮದೇ ಆದ ರೀತಿಯಲ್ಲಿ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಶ್ರೀಸಿದ್ದಗಂಗಾ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಸುರೇಶ್ ವಿ. ಕುಲಕರ್ಣಿ ಮಹಿಳೆಯರು ತಂತ್ರಜ್ಞಾನವನ್ನು ಬಳಸಿಕೊಂಡು ಸಾಧಕಿಯರ ಆದರ್ಶಗಳನ್ನು ಪಾಲಿಸಬೇಕು ಎಂದರು. ಯಶಸ್ಸಿಗೆ ತಾಳ್ಮೆ, ಪರಿಶ್ರಮ ಬಹಳ ಮುಖ್ಯ ಹಾಗೂ ಮಹಿಳೆಯರು ಮನಸ್ಸು ಮಾಡಿದರೆ ಇಡೀ ಜಗತ್ತನ್ನು ಆಳಬಲ್ಲರು. ಲಿಂಗ ಸಮಾನತೆಯನ್ನು ತರುವ ಉದ್ದೇಶದಿಂದ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿ ಹಿರಿಯ ಉಪಾನ್ಯಾಸಕಿ ಡಾ.ಸುಮನ ಅವರನ್ನು ಸನ್ಮಾನಿಸಲಾಯಿತು. ಡಾ.ಮೇಘನ ಎಂ.ಎನ್, ವಿಶೇಷ ಉಪನ್ಯಾಸ ನೀಡಿದರು. ಶ್ರೀ ಸಿದ್ದಗಂಗಾ ಔಷಧ ಮಹಾವಿದ್ಯಾಲಯದ ಅಧ್ಯಾಪಕರುಗಳು, ವಿದ್ಯಾರ್ಥಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4