ತುಮಕೂರು: ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಎಲೆ ಅಡಿಕೆ ಎಂಜಲು ಉಗಿದ ಮಹಿಳೆಯನ್ನು ಪ್ರಶ್ನಿಸಿದ್ದಕ್ಕೆ ಕಂಡಕ್ಟರ್‌ಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಗುರುವಾರ ಸಂಜೆ ನಡೆದಿದೆ.
ಪಾವಗಡದಿಂದ ತುಮಕೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿಗೆ ತೆರಳಬೇಕಾದ ಆರು ಮಂದಿ ಪ್ರಯಾಣಿಕರು ತಪ್ಪಾಗಿ ಬಸ್‌ಗೆ ಹತ್ತಿದ್ದರು. ಅವರಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದರು. ಕಂಡಕ್ಟರ್ ಅನಿಲ್ ಕುಮಾರ್ ಅವರು, ಈ ಬಸ್ ಬೆಂಗಳೂರಿಗೆ ಹೋಗುವುದಿಲ್ಲ, ಬೇರೊಂದು ಬಸ್ ಹತ್ತುವಂತೆ ಸೂಚಿಸಿದ್ದಾರೆ ಈ ವೇಳೆ ಬಸ್ ಇಳಿಯುವಾಗ ಒಬ್ಬ ಮಹಿಳೆ ಬಸ್ ನ ಒಳಗೆ ಎಲೆ ಅಡಿಕೆಯ ಎಂಜಲು ಉಗಿದರು.
ಇದನ್ನು ಗಮನಿಸಿದ ಕಂಡಕ್ಟರ್ ಮಹಿಳೆಯನ್ನು ಪ್ರಶ್ನಿಸಿ, ಸ್ವಚ್ಛಗೊಳಿಸಲು ಕೇಳಿದಾಗ, ಮಾತಿಗೆ ಮಾತು ಬೆಳೆದು ಮಹಿಳೆ ಮತ್ತು ಅವರ ಜೊತೆಗಿದ್ದವರು ಅವಾಚ್ಯ ಶಬ್ದಗಳಿಂದ ಕೂಗಾಡಲು ಆರಂಭಿಸಿದರು. ಈ ವೇಳೆ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು ದೊಣ್ಣೆಯಿಂದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಂಡಕ್ಟರ್ ಅನಿಲ್ ಕುಮಾರ್ ಅವರು ತಕ್ಷಣವೇ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಹಲ್ಲೆ ನಡೆಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ವರದಿ :- ನಂದೀಶ್ ನಾಯ್ಕ. ಪಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4