ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-–2025 ಕ್ಕೆ ಸಂಬಂಧಿಸಿದಂತೆ, ಒಳಮೀಸಲಾತಿ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದ್ದು, ಮನೆ ಮನೆ ಭೇಟಿ ಸಮೀಕ್ಷೆಯು ಮೇ 17 ರಿಂದ 25 ವರೆಗೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಕಾರ್ಯದ ಅವಧಿಯನ್ನು ಮೇ. 28 ರವರೆಗೆ ವಿಸ್ತರಿಸಲಾಗಿದೆ.
ಮತಗಟ್ಟೆವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಅವಧಿಯನ್ನು ಮೇ 26 ರಿಂದ 28 ಮೇ ವರೆಗೂ ನಿಗದಿಗೊಳಿಸಿದೆ. ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವ ಅವಧಿಯನ್ನು ಮೇ 19 ರಿಂದ ಮೇ 28 ರವರೆಗೆ ನಿಗದಿಗೊಳಿಸಿದೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್ ಸಿ ಒಳ ಮೀಸಲು ಏಕಸದಸ್ಯ ವಿಚಾರಣಾ ಆಯೋಗದ ಮುಖ್ಯಸ್ಥ ನ್ಯಾ.ಡಾ.ಎಚ್.ಎನ್.ನಾಗಮೋಹನ್ ದಾಸ್ ಅವರು, ಅನೇಕ ಸಂಘಟನೆಗಳು ಹಾಗೂ ಹಲವು ಜಿಲ್ಲಾಧಿಕಾರಿಗಳು ಮನೆ ಮನೆಗೆ ಭೇಟಿ ಮಾಡಿ ಸಮೀಕ್ಷೆ ನಡೆಸಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದರು.
ಮೇ 5ರಿಂದ ಶುರುವಾಗಿರುವ ಸಾಕ್ಷಾತ್ ಸಮೀಕ್ಷೆಯಲ್ಲಿ ಮೇ 15ರವರೆಗೆ ಶೇಕಡ 73.72ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 31 ಜಿಲ್ಲೆಗಳಲ್ಲಿ 1841258, ಬಿಬಿಎಂಪಿ ವ್ಯಾಪ್ತಿಯಲ್ಲಿ 55027 ಕುಟುಂಬಗಳ ಸಮೀಕ್ಷಾ ಕಾರ್ಯಮುಗಿದಿದ್ದರೆ, 31 ಜಿಲ್ಲೆಗಳ 970233, ಬಿಬಿಎಂಪಿ ವ್ಯಾಪ್ತಿಯಲ್ಲಿ 1326323 ಸೇರಿ ಒಟ್ಟು 11032556 ಎಸ್ ಸಿಯೇತರ ಕುಟುಂಬಗಳನ್ನು ಭೇಟಿ ಮಾಡಲಾಗಿದೆ. ಶುಕ್ರವಾರ ಸಂಜೆಯ ವೇಳೆಗೆ 20 ಲಕ್ಷ ಎಸ್ ಸಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಮನೆ ಮನೆಗೆ ಭೇಟಿ ಅವಧಿ ವಿಸ್ತರಣೆ, ವಿಶೇಷ ಶಿಬಿರ ಹಾಗೂ ಆನ್ ಲೈನ್ ನಲ್ಲಿ ಸಲ್ಲಿಕೆ ದಿನಾಂಕ ಪರಿಷ್ಕರಿಸಿದ್ದರೂ ಸುಪ್ರೀಂ ಕೋರ್ಟ್ ನಿಗದಿಪಡಿಸಿ ವೈಜ್ಞಾನಿಕ, ನಿಖರ ದತ್ತಾಂಶಗಳ ಆಧಾರದಲ್ಲಿ ಎಸ್ ಸಿ ಮೀಸಲು ವರ್ಗೀಕರಣ ಶಿಫಾರಸು ಸಹಿತ ನಿಗದಿತ ಕಾಲಮಿತಿಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————