ತುಮಕೂರು: ಜಿಲ್ಲೆಯಲ್ಲಿ ಮೇ 5 ರಿಂದ ಕೈಗೊಂಡಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಡಿ ಮನೆ–ಮನೆ ಭೇಟಿ ನೀಡಿ ಗಣತಿ ಮಾಡುವ ಅವಧಿಯನ್ನು ಮೇ 25ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಪತ್ರಿಕಾ ಹೇಳಿಕೆ ನೀಡಿದ ಅವರು ಮನೆ–ಮನೆ ಭೇಟಿ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಿಸಲು ಮೇ 26 ರಿಂದ 28ರವರೆಗೆ ಸಮೀಕ್ಷೆಯ ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ನಡೆಸಲಾಗುವುದು. ಮನೆ-ಮನೆ ಸಮೀಕ್ಷೆ ಹಾಗೂ ವಿಶೇಷ ಶಿಬಿರದಲ್ಲಿ ಜಾತಿಯ ಬಗ್ಗೆ ಘೋಷಣೆ ಮಾಡಿಕೊಳ್ಳದವರು ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಮೇ 19 ರಿಂದ 28ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ತಾಂಡಾ, ಕಾಲೋನಿಗಳ ಮನೆ–ಮನೆ ಭೇಟಿ ಕೈಬಿಟ್ಟು ಹೋಗಿದ್ದಲ್ಲಿ ಈ ದಿನವೇ ತೆರಳಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಬೇಕು. ತಮಗೆ ವಹಿಸಿರುವ ಗಣತಿ ಕಾರ್ಯವನ್ನು ಶೇ.100ರಷ್ಟು ಪೂರ್ಣಗೊಳಿಸಬೇಕು. ಸಮೀಕ್ಷಾ ಕಾರ್ಯಕ್ಕೆ ಗೈರು ಹಾಜರಾಗಿರುವ ಗಣತಿದಾರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾಗದ ಗಣತಿದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗಣತಿದಾರರಿಗೆ ಸೂಚನೆ ನೀಡಿದರು.
ಗಣತಿದಾರರು ತಮ್ಮ ವ್ಯಾಪ್ತಿಯಲ್ಲಿರುವ ಗಣ್ಯ ವ್ಯಕ್ತಿಗಳು, ಸಂಸದರು, ಸಚಿವರು, ಶಾಸಕರು, ವಿವಿಧ ಜನಪ್ರತಿನಿಧಿಗಳಿದ್ದಲ್ಲಿ ಅವರನ್ನು ಭೇಟಿ ಮಾಡಿ ಅವರನ್ನು ಸಮೀಕ್ಷೆಗೆ ಒಳಪಡಿಸಬೇಕೆಂದು ಗಣತಿದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW