ಬೀದರ್ : ಸಾರ್ವಜನಿಕರು ಕೊರೋನಾ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ಜಾಗೃತಿ ಅಗತ್ಯವಾಗಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಪರಿಸ್ಥಿತಿ ಎದುರಿಸಲು ಬ್ರಿಮ್ಸ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ನೀಡುವ ಮುನ್ನೆಚ್ಚೆರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಶಂಕಿತ ವ್ಯಕ್ತಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಪಕ್ಕದಲ್ಲಿರುವ ವ್ಯಕ್ತಿಗೆ ತುಂತುರು ಹನಿಗಳ ಮೂಲಕ ಈ ರೋಗ ಹರಡುತ್ತದೆ. ಆದುದ್ದರಿಂದ ಕೆಮ್ಮು, ನೆಗಡಿ ಹೊಂದಿರುವ ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳಲು ಮಾಸ್ಕ್ ಬಳಸಬೇಕು. ಈ ತರಹದ ಲಕ್ಷಣ ಹೊಂದಿರದ ವ್ಯಕ್ತಿಗಳು ಮಾಸ್ಕ್ ಬಳಸುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ
ಸಾರ್ವಜನಿಕರು ಸೋಂಕು ತಗಲದಂತೆ ಅನುಸರಿಸುವ ಮುಂಜಾಗೃತಾ ಕ್ರಮಗಳು: ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವುದು ಮತ್ತು ಅದನ್ನು ಸಮಪರ್ಕವಾಗಿ ವಿಲೇವಾರಿ ಅಥವಾ ನಾಶ ಪಡಿಸುವುದು. ಆಗಾಗ ಕೈಗಳನ್ನು ಶೇ.70 ಪ್ರತಿಶತಕ್ಕಿಂತ ಹೆಚ್ಚು ಅಲ್ಕೋಹಾಲ್ ಇರುವ ಹ್ಯಾಂಡ್ ವಾಶ್ ಗಳಿಂದ ತೊಳೆಯುವುದು. ವೈಯಕ್ತಿಕ ಸ್ವಚ್ಛತೆ ಪಾಲಿಸುವುದು. ಜನನಿಬಿಡ ಪ್ರದೇಶದಿಂದ ದೂರವಿರುವುದು. ಸೋಂಕು ಇರುವ ವ್ಯಕ್ತಿಯ ಅತೀ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು ಅಥವಾ ಚುಂಬನ ಮಾಡಬಾರದು. ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಮುಟ್ಟುವ ವಸ್ತುಗಳು ಮುಟ್ಟಬಾರದು.
ಸಾಮಾನ್ಯ ಜ್ವರವಾಗಿದ್ದಲ್ಲಿ ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸೋಂಕು ಕುರಿತು ಮಾಹಿತಿ ನೀಡಲಾಗಿದೆ. ಈ ಸಿಬ್ಬಂದಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆಆರೋಗ್ಯ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW