ಕೊರಟಗೆರೆ : ಪಟ್ಟಣದ ಮೂಡಲಪಣ್ಣೆ ಪುಣ್ಯಕೋಟಿ ಬಡಾವಣೆಯಲ್ಲಿರುವ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು.10 ರಂದು ಗುರು ಪೂರ್ಣಿಮಾ ಹಾಗೂ 6ನೇ ವರ್ಷದ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶಿರಡಿ ಸಾಯಿಬಾಬಾ ಸೇವಾ ಸಮಿತಿ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಪಟ್ಟಣದ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮದೊಂದಿಗೆ ದೇವಾಲಯದ 6ನೇ ವರ್ಷದ ಮಹೋತ್ಸವ ಅಂಗವಾಗಿ ಪ್ರಧಾನ ಅರ್ಚಕ ಸಂಜಯ್ ಮಿಶ್ರ ನೇತೃತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ, ಕೋಲಾಟ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಪೂಜಾ ಕಾರ್ಯಕ್ರಮದ ನಂತರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 9:30ರವರೆಗೂ ನಿರಂತರವಾಗಿ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು.
ನಿರ್ದೇಶಕ ಎಂ.ಜಿ.ಬದ್ರಿಪ್ರಸಾದ್ ಮಾತನಾಡಿ, ಜು.10 ರಂದು ನಡೆಯುವ 6ನೇ ವರ್ಷದ ಮಹೋತ್ಸವ ಕಾರ್ಯಕ್ರಮ ಅಂಗವಾಗಿ 6:30 ರಿಂದ 9:30ರವರೆಗೆ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದ ಪ್ರತಾಪ್ ಹಾಗೂ ಸಂಗಡಿಗ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಸ್ಥಳೀಯ ವಾಸವಿ ಮಹಿಳಾ ಮಂಡಳಿ ಮಹಿಳೆಯರಿಂದ ಭಕ್ತಿಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕೆ.ಎಲ್.ಗಿರೀಶ್ ಮಾಹಿತಿ ನೀಡಿ, ದೇವಾಲಯದ ಮೇಲಿನ ಗೋಪುರದಲ್ಲಿ ನೂತನ ಕಳಶ ಸ್ಥಾಪನೆ ಮಾಡಲಾಗುವುದು ಹಾಗೂ ಕಾಕಡ ಆರತಿ, ಸುಪ್ರಭಾತ ಸೇವೆ, ಮೂಲ ದೇವರಿಗೆ ಅಭಿಷೇಕ, ವಿಷ್ಣು ಸಹಸ್ರನಾಮ ಪರಾಯಣದೊಂದಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖೈಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಸದಸ್ಯರು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಸುಧಾಮಣ ಶಂಕರನಾರಾಯಣ ಶ್ರೇಷ್ಟಿ, ಖಜಾಂಚಿ ಪ್ರಕಾಶ್‌ಕುಮಾರ್, ನಿರ್ದೇಶಕರುಗಳಾದ ನವೀನ್ ಕುಮಾರ್, ರತ್ನಾಕರ್, ಅರ್ಚಕ ಸಂಜಯ್‌ಮಿಶ್ರ, ಹರ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


