ಕೊರಟಗೆರೆ : ಸಮಾಜಕ್ಕೆ ದುಡಿಯಬೇಕು ಎಂಬ ತುಡಿತ ಇದ್ದವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ. ಅದೆಷ್ಟೋ ಮಂದಿ ಹಿರಿಯರ ಸೇವಾ ಮನೋಭಾವದಿಂದ ರೋಟರಿ ಸಂಸ್ಥೆ ಗಟ್ಟಿಯಾಗಿ ಬೆಳೆದಿದ್ದು, ಪ್ರಪಂಚದಾದ್ಯಂತ ತನ್ನ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದೆ ಎಂದು ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸಿಎನ್ ದುರ್ಗಾ ಹೋಬಳಿ ಸಿದ್ದರಬೆಟ್ಟ ಶ್ರೀಮಠದ ಸಮುದಾಯ ಭವನದಲ್ಲಿ ರೋಟರಿ ಸಿದ್ದರಬೆಟ್ಟ– 3192 (2025-26)ನೇ ಸಾಲಿನ ಅಧ್ಯಕ್ಷರು, ನಿರ್ದೇಶಕರು ಮತ್ತು ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
2024–25ನೇ ಸಾಲಿನ ಅಧ್ಯಕ್ಷ ರಘು ತನ್ನ ಅವಧಿಯಲ್ಲಿ ರೋಟರಿ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಾರೆ. ಕಾಮಧೇನು ಯೋಜನೆಯಿಂದ 220ಕ್ಕೂ ಹೆಚ್ಚು ಬಡ ಕುಟುಂಬ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿದೆ. ಬೋರ್ ವೆಲ್ ರಿಚಾರ್ಜ್, ಇತ್ತೀಚಿಗೆ ಪ್ರಾರಂಭಿಸಿದ ಕೊರಟಗೆರೆ ರೇಣುಕಾ ಆಸ್ಪತ್ರೆ ಸಹಯೋಗದಲ್ಲಿ ಡಯಾಲಿಸಿಸ್ ಕೇಂದ್ರದಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದ್ದು, ನೂತನ ಪದಾಧಿಕಾರಿಗಳು ಈ ಕಾರ್ಯಕ್ರಮಗಳನ್ನು ಮುಂದುವರೆಸಬೇಕಿದೆ ಎಂದು ಹೇಳಿದರು.
ನಿಕಟ ಪೂರ್ವ ಜಿಲ್ಲಾ ರಾಜ್ಯಪಾಲ ಡಾ.ಎನ್.ಎಸ್ ಮಹದೇವ ಪ್ರಸಾದ್ ಮಾತನಾಡಿ, ರೋಟರಿ ಸಂಸ್ಥೆ ಪೋಲಿಯೋ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸಿ ಮತ್ತು ಕೋವಿಡ್ ಸಮಯದಲ್ಲಿ ರೋಟರಿ ಸಂಸ್ಥೆ ತನ್ನದೇ ಆದ ಕಾರ್ಯಸೂಚಿ ಹೊಂದಿ ಯಶಸ್ವಿಯಾಗಿದೆ. ರಘು ಅವಧಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸಿ ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.
ಸಿದ್ದರಬೆಟ್ಟ ರೋಟರಿ ನೂತನ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ, ನನ್ನ ಅವಧಿಯಲ್ಲಿ ಸರ್ಕಾರಿ ಶಾಲೆಯಲ್ಲಿನ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಮಾದರಿ ಶಾಲೆಯನ್ನಾಗಿಸುವ ಗುರಿ ಹೊಂದಿದ್ದೇನೆ. ಸಸ್ಯಕಾಶಿ ಸಿದ್ದರಬೆಟ್ಟದ ಅರಣ್ಯ ಪ್ರದೇಶದಲ್ಲಿ ಅನೈರ್ಮಲ್ಯ ಕಂಡು 300 ಕ್ಕೂ ಹೆಚ್ಚಿನ ಯುವಕರ ಜೊತೆಗೂಡಿ ಸ್ವಚ್ಚತೆ ಕಾರ್ಯದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಂ.ಎಸ್ ಉಮೇಶ್, ಸಹಾಯಕ ಗವರ್ನರ್ ಜಿ.ಎನ್.ಜನಾರ್ಧನ್, ವಲಯ ರಾಯಭಾರಿ ಪ್ರಸನ್ನಕುಮಾರ್, ವಲಯ ಕಾರ್ಯದರ್ಶಿ ಎಂ.ಜಿ ಶ್ರೀನಿವಾಸಮೂರ್ತಿ, ಸಮ್ಮೇಳನದ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ನಿರ್ಗಮನ ಅಧ್ಯಕ್ಷ ರಘು ಕೆ.ಎನ್, ಕಾರ್ಯದರ್ಶಿ ಶಿವಕುಮಾರ್ ಕೆ.ಎನ್, ದರ್ಶನ್ ಕೆ.ಎಲ್, ರಿತು ದರ್ಶನ್, ರೂಪ ರಘು ಸೇರಿದಂತೆ ಇತರರು ಇದ್ದರು.
ಅಧ್ಯಕ್ಷರು- ನಿರ್ದೇಶಕ –ಪದಾಧಿಕಾರಿಗಳ ಪದಗ್ರಹಣ:
2025–26ನೇ ಸಾಲಿನ ರೋಟರಿ ಸಿದ್ದರಬೆಟ್ಟ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಬಾಲಾಜಿ ದರ್ಶನ್ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸಚಿನ್, ಪವನ್, ಟಿ.ಎನ್ ಸುಂದರ್, ಅರುಣ್ ಕೆ.ಎಸ್ ಸೇರಿ ಹಲವರನ್ನು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಿಕಟ ಪೂರ್ವ ಜಿಲ್ಲಾ ರಾಜ್ಯಪಾಲ ಡಾ.ಎನ್.ಎಸ್ ಮಹದೇವ ಪ್ರಸಾದ್ ಪದವಿ ಪ್ರಧಾನ ಮಾಡಿದರು.
ಬೋರ್‌ವೆಲ್ ರಿಚಾರ್ಜ್ ಕಾರ್ಯಕ್ರಮಕ್ಕೆ ಚಾಲನೆ:
ಅಂತರ್ಜಲ ಮಟ್ಟ ವೃದ್ಧಿಗೆ ರೋಟರಿ ಸಂಸ್ಥೆಯು ಬೋರ್‌ವೆಲ್ ರಿಚಾರ್ಜ್ ಯೋಜನೆಯಿಂದ ರೈತನ ಬದುಕು ಬಂಗಾರವಾಗಲಿದೆ ಎಂಬ ಹಿತದೃಷ್ಠಿಯಿಂದ ರೋಟರಿ ಸಂಸ್ಥೆ ಹಮ್ಮಿಕೊಂಡಿದ್ದು ಬೋರ್‌ವೆಲ್ ರಿಚಾರ್ಜ್ ಕಾರ್ಯಕ್ರಮಕ್ಕೆ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ರಾಜ್ಯಪಾಲ ಡಾ.ಮಹದೇವ ಪ್ರಸಾದ್, ನೂತನ ಅಧ್ಯಕ್ಷ ಬಾಲಾಜಿ ದರ್ಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಿದ್ದೇನೆ. ಡಯಾಲಿಸಿಸ್ ಶಿಬಿರ, ಕಾಮಧೇನು ಯೋಜನೆ, ಅಂತರ್ಜಲ ಮಟ್ಟ ವೃದ್ಧಿಗೆ ಬೋರ್‌ವೆಲ್ ರಿಚಾರ್ಜ್ ಕಾರ್ಯಕ್ರಮ ಈಗಾಗಲೇ ತಾಲ್ಲೂಕಿನಲ್ಲಿ ಯಶಸ್ವಿ ಕಂಡಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ರೋಟೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ರಘು ಕೆ.ಎನ್. ನಿರ್ಗಮನ ಅಧ್ಯಕ್ಷ, ಸಿದ್ದರಬೆಟ್ಟ ರೋಟರಿ ತಿಳಿಸಿದರು.
ವರದಿ : ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC