ಪಾವಗಡ: ರಾಷ್ಟ್ರೀಯ ಮಹಾ ಮುಷ್ಕರದ ಅಂಗವಾಗಿ ಪಾವಗಡ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗೆ ಕಾರ್ಮಿಕರು, ನೌಕರರು, ರೈತ ಸಂಘಟನೆಗಳು ಧ್ವನಿ ನೀಡಿದವು. ಪಾವಗಡದ ಶನಿ ಮಹಾತ್ಮ ವೃತ್ತದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಕನಿಷ್ಠ ವೇತನ ನೀಡಬೇಕು, ಗುಜರಾತ್ ಹೈಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು, ಕಾರ್ಮಿಕ ಸಂಹಿತೆಯನ್ನು ರದ್ದುಗೊಳಿಸಬೇಕು, ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಹಾಗೂ ಉದ್ಯೋಗ ಸೃಷ್ಟಿಸಬೇಕು ಎಂಬಂತಹ ಬೇಡಿಕೆಗಳೊಂದಿಗೆ ಈ ಪ್ರತಿಭಟನೆ ನಡೆಯಿತು.
ಪ್ರವಾಸಿ ಮಂದಿರದಿಂದ ಶನಿ ಮಹಾತ್ಮ ವೃತ್ತದವರೆಗೆ ನಡೆದ ರ್ಯಾಲಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು, ಅಂಗನವಾಡಿ ಹಾಗೂ ಬಿಸಿಯೂಟ ನೌಕರರು, ಗ್ರಾಮ ಪಂಚಾಯತಿ ನೌಕರರು, ಆಶಾ ಕಾರ್ಯಕರ್ತೆಯರು, ರೈತ ಸಂಘದ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು.
ಶನಿ ಮಹಾತ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಧ್ಯಾಹ್ನ 3 ಗಂಟೆಗೆ ಪೊಲೀಸರ ದೌತ್ಯದಲ್ಲಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಕಾರ್ಮಿಕ ಸಂಘಟನೆಯ ಅಧ್ಯಕ್ಷ ರಾಮಾಂಜಿನಪ್ಪ ಅವರನ್ನು ಬಂಧಿಸಲಾಯಿತು.
ಪ್ರತಿಭಟನೆ ನಂತರ ತಹಸೀಲ್ದಾರ್ ಕಚೇರಿಯತ್ತ ನುಗ್ಗಿದ ಮಹಿಳಾ ಪ್ರತಿಭಟನಾಕಾರರು ಬಳ್ಳಾರಿ ರಸ್ತೆ ತಡೆ ಮಾಡಿ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು. ಈ ವೇಳೆ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಶಿವಗಂಗಮ್ಮ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷ ಕೆಂಚಮ್ಮ ಅವರನ್ನು ಸಹ ಪೊಲೀಸರು ಬಂಧಿಸಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC