ರಾಮನಗರ: ಬಮೂಲ್ ರೈತರ ಸಂಸ್ಥೆ ಇದನ್ನು ಬೆಳೆಸುವುದು ನಮ್ಮ ಕರ್ತವ್ಯ. ಈ ಕೆಲಸವನ್ನು ನಾನು ಮಾಡುತ್ತೇನೆ. ಇದಕ್ಕೆ ಎಲ್ಲ ನಾಯಕರ ಬೆಂಬಲ ಬೇಕು. ಎಲ್ಲರ ಜೊತೆಯೂ ನಾನು ಚರ್ಚೆ ನಡೆಸುತ್ತೇನೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಮಾಗಡಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸುರೇಶ್ ಅವರು ಭಾನುವಾರ ಮಾತನಾಡಿದರು. ನನಗೆ ಡೈರಿಯ ಸಂಬಳ, ಡೈರಿಯ ಅನುಕೂಲಗಳು ಬೇಡ. ನಾನು ಇರುವ ತನಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನ ಮನವಿ ಎಂದರೆ ನಂದಿನಿ ಉಳಿಸಿ, ಬೆಳೆಸಿ, ಉತ್ಪನ್ನಗಳನ್ನು ಬಳಸಿ ಎಂದರು.
ನಂದಿನಿ ಉತ್ಪನ್ನಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಪನ್ನೀರಿನ ಬೇಡಿಕೆಗೆ ಶೇ.5ರಷ್ಟು ಮಾತ್ರ ನಾವು ಪೂರೈಕೆ ಮಾಡುತ್ತಿದ್ದೇವೆ. ಇದನ್ನು ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಜನರೇ ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ಮಾರುಕಟ್ಟೆ ಹೆಚ್ಚು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಹೊಸಕೋಟೆಯಲ್ಲಿ 22 ಎಕರೆ ಜಮೀನು, ದೊಡ್ಡಬಳ್ಳಾಪುರದಲ್ಲಿಯೂ 8 ಎಕರೆ ಜಮೀನಿದೆ. ಅಲ್ಲಿಯೂ ಹಾಲು ಸಂಸ್ಕರಣ ಕೇಂದ್ರ ತೆರೆಯಬೇಕು ಎಂಬುದು ಅಲ್ಲಿನವರ ಬೇಡಿಕೆ. ಮಾಗಡಿ ತಾಲೂಕಿನ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ಕಾವೇರಿ, ಹೇಮಾವತಿ, ಎತ್ತಿನಹೊಳೆಯಿಂದಲೂ ನೀರು ಬರುವ ಸಂಭವವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC