ಸರಗೂರು: ಜುಲೈ ತಿಂಗಳ ಪಡಿತರ ಆಹಾರ ಧಾನ್ಯ ಅರ್ಧ ತಿಂಗಳು ದಾಟಿದರೂ ಪಡಿತರ ಚೀಟಿದಾರಿಗೆ ಇನ್ನೂ ತಲುಪಿಲ್ಲ. ಅಂಗಡಿ ಮುಂದೆ ಎಷ್ಟು ಹೊತ್ತು ಕಾದರೂ ಬಾಗಿಲು ತೆರೆಯದೇ ಇರುವ ಕಾರಣದಿಂದ ಜನರು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಪಡಿತರ ಆಹಾರ ಧಾನ್ಯವನ್ನು ನ್ಯಾಯ ಬೆಲೆ ಅಂಗಡಿ ಮಾಲಿಕರು ತಲುಪಿಸುತ್ತಿಲ್ಲ, ಅಂಗಡಿಯನ್ನು ಮುಚ್ಚಿಕೊಂಡಿರುವುದು ಬುಧವಾರದಂದೂ ಕಂಡು ಬಂದಿದೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ನೀಡದೆ ಅಂಗಡಿ ಮಾಲಿಕರು ನಿರ್ಲಕ್ಷ ಮಾಡುತ್ತಿದ್ದಾರೆ ವಾರ್ಡಿನ ಜನರು ಆರೋಪಿಸಿದರು.
ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಒಟ್ಟು 10 ಕೆ.ಜಿ. ಅಕ್ಕಿಯನ್ನು ಪ್ರತಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಪ್ರಸಕ್ತ ಜುಲೈ ತಿಂಗಳಿನ ಅರ್ಧ ಭಾಗ ಮುಗಿದರೂ ಇನ್ನೂ ಪಡಿತರ ಚೀಟಿದಾರರಿಗೆ ಅಕ್ಕಿ ದೊರೆತಿಲ್ಲ.
ಪಟ್ಟಣದಲ್ಲಿ 12 ನ್ಯಾಯಬೆಲೆ ಅಂಗಡಿಗಳಿವೆ. ಅಂದಾಜು 9 ಸಾವಿರ ಹೆಚ್ಚು ಪಡಿತರ ಚೀಟಿದಾರರಿದ್ದಾರೆ. ಅಕ್ಕಿಗಾಗಿ ಪ್ರತಿದಿನ ನ್ಯಾಯಬೆಲೆ ಅಂಗಡಿಗೆ ಅಲೆದಾಡುತ್ತಿದ್ದಾರೆ. ಕೆಲವೊಂದು ನ್ಯಾಯಬೆಲೆ ಅಂಗಡಿಗಳು ಬೀಗ ಜಡಿದಿದ್ದರೆ ಇನ್ನು ಕೆಲ ನ್ಯಾಯ ಬೆಲೆ ಅಂಗಡಿಗಳು ತೆರೆದಿದ್ದರೂ ‘ಅಕ್ಕಿ ಕೊಡಲು ಆದೇಶ ಬಂದಿಲ್ಲ’ ಎಂದು ಪಡಿತರ ಚೀಟಿದಾರರನ್ನು ಬರಿಗೈಲಿ ವಾಪಸ್ ಕಳುಹಿಸುತ್ತಿದ್ದಾರೆ.
ಇದುವರೆಗೆ ಬರೀ ಅಕ್ಕಿ ಮಾತ್ರ ಹಂಚಿಕೆಯಾಗಿದ್ದರಿಂದ ಪ್ರತಿ ತಿಂಗಳು ನಿಗದಿತ ವೇಳೆಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಸಿಗುತ್ತಿತ್ತು. ಆದರೆ, ಜೂನ್ ತಿಂಗಳಿಂದ ಅನ್ನಭಾಗ್ಯ ಯೋಜನೆಯಲ್ಲಿನ 5 ಕೆ.ಜಿ ಅಕ್ಕಿ ಬದಲಿಗೆ 3 ಕೆ.ಜಿ ಅಕ್ಕಿ ಜತೆ 2 ಕೆ.ಜಿ. ರಾಗಿ ನೀಡಲು ಆಹಾರ ಇಲಾಖೆ ಮೇಲಾಧಿಕಾರಿಗಳು ಸೂಚನೆ ನೀಡಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಪ್ರತಿ ತಿಂಗಳು ಮೊದಲ ವಾರದಲ್ಲೇ ಎಫ್ ಸಿಐನಿಂದ (ಭಾರತದ ಆಹಾರ ನಿಗಮ) ಸಗಟು ಮಳಿಗೆಗಳಿಗೆ ಅಕ್ಕಿ ಎತ್ತುವಳಿ ಮಾಡಲಾಗುತ್ತದೆ. ಆನಂತರ ಸಗಟು ಮಳಿಗೆಗಳಿಂದ ಎತ್ತುವಳಿ ಮಾಡುವ ನ್ಯಾಯಬೆಲೆ ಅಂಗಡಿಗಳು ಪಡಿತರ ಚೀಟಿದಾರರಿಗೆ ಪಡಿತರ ವಿತರಿಸುತ್ತವೆ. ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿಗಳು ಅಕ್ಕಿಯನ್ನು ಎತ್ತುವಳಿ ಮಾಡಿದ್ದು, ಅಂಗಡಿ ಮಾಲಿಕರು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ ಪಡಿತರ ಚೀಟಿದಾರರಿಗೆ, ಆಹಾರ ಧಾನ್ಯವನ್ನು ವಿತರಣೆ ಮಾಡಿಲ್ಲ ಎಂದು ನಮ್ಮ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ. ಆದುದರಿಂದ ನಾವುಗಳು, ಅಂಗಡಿ ಮುಂದೆ ಜನರು ನಿಂತಿರುವ ಕಂಡು ಸ್ಥಳಕ್ಕೆ ಆಗಮಿಸಿ ನೋಡಿದಾಗ ಅವರು ಸಮಸ್ಯೆಗಳನ್ನು ಹೇಳಿಕೊಂಡಾಗ, ಅಂಗಡಿ ಮಾಲಿಕ ಕರೆ ಮಾಡಿದರೆ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆಂದು ಕಂಡು ಬಂದಿದೆ. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿದೆ ಎಂದು ಪಪಂ ಸದಸ್ಯ ಶ್ರೀನಿವಾಸ ದೂರಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC