ಸರಗೂರು: ತಾಲ್ಲೂಕು ಚಿಕ್ಕದೇವಮ್ಮನ ಬೆಟ್ಟದ ಸುತ್ತಮುತ್ತಲು ಕಳೆದ ಅನೇಕ ವರ್ಷಗಳಿಂದ ಕಾಡಾನೆಗಳ ಹಾವಳಿ ಹಾಗೂ ಕಾಡು ಪ್ರಾಣಿಗಳಿಂದ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದರೂ ಸಹ ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷದಿಂದ ಪ್ರತಿಯೊಬ್ಬ ರೈತರೂ ಸಹ ಲಕ್ಷಾಂತರ ರುಪಾಯಿ ಸಾಲಗಾರನಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುತ್ತಮುತ್ತಲ ಗ್ರಾಮಗಳಾದ ಲಂಕೆ, ಮನುಗನಹಳ್ಳಿ, ಹುಣಸಹಳ್ಳಿ, ಹೂವಿನಕೊಳ, ಅಲ್ಲಯ್ಯನಪುರ, ಬಸಾಪುರ, ಚಂದ್ರವಾಡಿ, ನಲ್ಲಿತಾಳಪುರ, ರಾಜೂರು, ಕಟ್ಟೆಹುಣಸೂರು, ನಂಜೀಪುರ, ಕುಂದೂರು, ಕಲ್ಲಂಬಾಳು ಹಾಗೂ ದಡದಹಳ್ಳಿ ಗ್ರಾಮದ ರೈತರು ಬೆಳೆದಂತಹ ಬೆಳೆ ಕಾಡುಪ್ರಾಣಿಗಳಿಂದ, ಕೈಗೆ ಬಂದತಹ ತುತ್ತು ಬಾಯಿಗೆ ಇಲ್ಲದಂತಾಗಿದೆ. ಇತ್ತ ಅರಣ್ಯಾಧಿಕಾರಿಗಳು ಬೆಳೆನಾಶಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಬೆಳೆ ನಷ್ಟ ನೀಡದೆ ಪರಿಹಾರವಾಗಿ ವರ್ಷಾನುಗಟ್ಟಲೆ ಕಾಯಿಸಿದ ನಂತರ ಬೆಳೆ ನಷ್ಟದ ಶೇ. 5% ನಷ್ಟನ್ನು ಮಾತ್ರ ಪರಿಹಾರದ ರೂಪವಾಗಿ ರೈತರಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅರಣ್ಯಾಧಿಕಾರಿಗಳ ಈ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷವನ್ನು ಖಂಡಿಸಿ ಎಲ್ಲಾ ಗ್ರಾಮಗಳ ಮುಖಂಡರ ನೇತೃತ್ವದಲ್ಲಿ ಹಾಗೂ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಸಮ್ಮುಖದಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸರಗೂರಿನ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಮೇಲ್ಕಾಣಿಸಿದ ಗ್ರಾಮಗಳ ರೈತ ಬಾಂಧವರ ಮುಂದಾಳತ್ವದಲ್ಲಿ ಧರಣಿ ಸತ್ಯಾಗ್ರಹ ಹಾಗೂ ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಈ ಪ್ರತಿಭಟನಾ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ರೈತ ಬಾಂಧವರು, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮೇಲ್ಕಾಣಿಸಿದ ಎಲ್ಲಾ ಗ್ರಾಮಗಳ ಯಜಮಾನರುಗಳು, ಯುವಮಿತ್ರರು, ಜನಪ್ರತಿನಿಧಿಗಳು, ರೈತ ಬಾಂಧವರು ಭಾಗವಹಿಸಿ ಈ ಧರಣಿ ಕಾರ್ಯಕ್ರಮ ಹಾಗೂ ಪ್ರತಿಭಟನಾ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕೆ ಹೇಳಿಕೆಯಲ್ಲಿ ಮನವಿ ಮಾಡಿಕೊಂಡರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC