ಸರಗೂರು: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಸದಾ ಮುಂದಿದ್ದು ಬದ್ಧತೆಯಿಂದ ಕೆಲಸ ಮಾಡುವ, ಉತ್ತಮ ವಿದ್ಯಾರ್ಹತೆ ಪಡೆದ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ ಎಂದು ಸರಗೂರು ಲಯನ್ಸ್ ಅಕಾಡೆಮಿ ಷೇರುದಾರರಾದ ಸುರೇಶ್ ಜೈನರವರು ಅಭಿಪ್ರಾಯಪಟ್ಟರು.
ತಾಲೂಕಿನ ಹಂಚೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉನ್ನತೀಕರಿಸಿದ ಹಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ಉಚಿತವಾಗಿ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು.
ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸಾಕಷ್ಟು ಸೌಕರ್ಯಗಳು ದೊರಕುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಶಾಲೆಯ ಶಿಕ್ಷಕ ರಂಗನಾಥ್ ಡಿ. ಮಾತನಾಡಿ, ಭಾರತೀಯ ಪರಂಪರೆಯಲ್ಲಿ ದಾನಶೀಲ ಮೌಲ್ಯಗುಣ ಮುಖ್ಯವಾಗಿದ್ದು, ಇಂತಹ ಕಾರ್ಯಗಳಿಂದ ಸಮಾಜದ ಸಮತೋಲನ ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಗುತ್ತದೆ. ಹಾಗೂ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಂಕಣದಲ್ಲಿ ಉತ್ತಮ ಆಟವಾಡುವುದರ ಮೂಲಕ ವ್ಯಕ್ತಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ವಿಜೇತರಾದ ಮಹೇಂದ್ರ ಮುಖ್ಯಮಂತ್ರಿ ಯಾಗಿ, ಪ್ರಾರ್ಥನಾ, ಉಪಮುಖ್ಯಮಂತ್ರಿಯಾಗಿ ಮಹದೇವಪ್ರಸಾದ್, ಇನ್ನಿತರರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು, ಹಿರಿಯ ಶಿಕ್ಷಕರು ಅನಿಲ್ ಕುಮಾರ್ ಎಚ್.ವಿ.ರವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಿಕಟಪೂರ್ವ ಮಂತ್ರಿಗಳಾದ ಶೌರ್ಯ, ಪ್ರೇರಣಾ, ಮಾಯಾವತಿ, ಅಶ್ವಿನಿರವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕರಾದ ಸುಬ್ಬರಾಮ್, ಸಹಶಿಕ್ಷಕರಾದ ರೇವತಿ, ಶಾಂತವ್ವ, ಸಹನಾ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಭುಸ್ವಾಮಿ, ಉಪಾಧ್ಯಕ್ಷರಾದ ಸೋಮೇಗೌಡ, ಮೂರ್ತಿ ಇನ್ನಿತರರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC