ಶಿವಮೊಗ್ಗ: ಅಣ್ಣನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತುಂಗಾನಗರ ಠಾಣೆ ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.
ಜುಲೈ 27ರ ಬೆಳಗ್ಗೆ ಶಿವಮೊಗ್ಗ ನಗರದ ಮೇಲಿನ ತುಂಗಾನಗರದಲ್ಲಿ ಮಣಿಕಂಠ ಎಂಬಾತ ತನ್ನ ಮನೆಯಲ್ಲಿಯೇ ಕೊಲೆಯಾಗಿದ್ದ. ಮಣಿಕಂಠ ಹಾಗೂ ಆತನ ತಮ್ಮ ಸಂತೋಷ್ ಒಟ್ಟಿಗೆ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಮನೆ ಪಕ್ಕದಲ್ಲಿಯೇ ವಾಸವಾಗಿರುವ ಸಹೋದರಿಯರು ಟೀ ಕೊಡಲೆಂದು ಹೋದಾಗ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು.
ಮಣಿಕಂಠನ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆದರೆ, ಈ ವೇಳೆ ಕೊಲೆಯಾದವನ ಸಹೋದರ ಸಂತೋಷ್ ಕಾಣೆಯಾಗಿದ್ದ.
ಹೀಗಾಗಿ, ಅನುಮಾನಗೊಂಡ ಪೊಲೀಸರು ಮೊದಲು ಸಂತೋಷ್ಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಆತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಣಿಕಂಠ ಹಾಗೂ ಸಂತೋಷ್ ಒಂದೇ ಮನೆಯಲ್ಲಿ ವಾಸವಿದ್ದು, ಈ ಮನೆಯು ಇವರ ತಂದೆಯ ಹೆಸರಿನಲ್ಲಿತ್ತು. ಹೀಗಾಗಿ, ಮನೆಯ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಘಟನೆ ನಡೆದ ರಾತ್ರಿ ಕುಡಿದುಕೊಂಡು ಬಂದ ಸಂತೋಷ್ ಮಣಿಕಂಠನ ಜೊತೆ ಮತ್ತೆ ಗಲಾಟೆ ಆರಂಭಿಸಿದ್ದಾನೆ. ನಂತರ ಜಗಳ ವಿಕೋಪಕ್ಕೆ ಹೋದಾಗ ಮೊದಲು ಗುದ್ದಲಿಯಿಂದ ಸಂತೋಷ್ ಮಣಿಕಂಠನ ತಲೆಗೆ ಹೊಡೆದಿದ್ದಾನೆ. ಇದರಿಂದ ಮಣಿಕಂಠ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೂ ಕೋಪ ತಣ್ಣಗಾಗದೇ, ಮನೆಯ ಹೊರಗೆ ಇದ್ದ ಚಪ್ಪಡಿ ಕಲ್ಲನ್ನು ಆತನ ತಲೆ ಮೇಲೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC