ಸರಗೂರು: ಇಂದಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಸಂಘಟನೆಗಳು ಕಾರ್ಯಚಟುವಟಿಕೆಗಳನ್ನು ರೂಪಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಎಚ್.ಡಿ. ಕೋಟೆ ಮತ್ತು ಸರಗೂರು ಪತ್ರಕರ್ತರ ಸಂಘದ ವತಿಯಿಂದ ಮೈಸೂರು ನಗರದ ಲಲಿತ ಮಹಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನ ಮಾಹಿತಿಯನ್ನು ಕೆಲವರು ಪತ್ರಕರ್ತರು ಎಂದು ಹೇಳಿ ಪಡೆದುಕೊಳ್ಳುತ್ತಾರೆ, ಆದರೆ ಆ ಮಾಹಿತಿ ಯಾವ ಪತ್ರಿಕೆಗಳಲ್ಲೂ ಪ್ರಕಟಗೊಂಡಿರುವುದಿಲ್ಲ, ಅಂತಹ ನಕಲಿ ಪತ್ರಕರ್ತರನ್ನು ಮಟ್ಟ ಹಾಕಬೇಕು ಎಂದು ಕರೆ ನೀಡಿದರು.
ಎಚ್.ಡಿ. ಕೋಟೆ ತಾಲ್ಲೂಕಿನ ಪತ್ರಕರ್ತರ ಬಹುದಿನದ ಬೇಡಿಕೆಯ ರೀತಿ ಇಂದು ಎಚ್.ಡಿ. ಕೋಟೆ ಪಟ್ಟಣದ ಕನಕ ಭವನದ ಪಕ್ಕದಲ್ಲಿ 60*40 ಅಳತೆಯ ಸಿಎ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ತಂದೆಯವರು ರಾಜಕಾರಣಕ್ಕೆ ಬಾರದಂತೆ ವಿಧ್ಯಾಭ್ಯಾಸದತ್ತ ನಮ್ಮನ್ನು ನಡೆಸುತ್ತಿದ್ದರು, ಆದರೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಶಾಸಕ ಸಾರಾ ಮಹೇಶ್‌ರವರ ಒತ್ತಡದಿಂದಾಗಿ ನನ್ನನ್ನು ಚುನಾವಣೆಗೆ ಸ್ಪರ್ದಿಸುವಂತೆ ತಂದೆ ಸೂಚಿಸಿದ ಪರಿಣಾಮವಾಗಿ ನಾನಿಂದು ಶಾಸಕನಾಗಿದ್ದೇನೆ ಎಂದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ ಇಂದಿನ ದಿನಗಳಲ್ಲಿನ ಎಐ ತಂತ್ರಜ್ಞಾನವನ್ನು ಗಮನಿಸಿದರೆ ಮುಂದೊಂದು ದಿನ ಪತ್ರಕರ್ತರಿಲ್ಲದ ಪತ್ರಿಕೋದ್ಯಮ ಸೃಷ್ಟಿಯಾಗುವ ಮುನ್ಸೂಚನೆ ಇಂದೇ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಕೆಲ ದೃಶ್ಯ ಮಾಧ್ಯಮಗಳಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರೂಪಣೆ ಮಾಡುತ್ತಿರುವುದು ಕಂಡು ಬಂದಿದ್ದು ಇದನ್ನು ಗಮನಿಸಿದಾಗ ಈ ಮೇಲಿನ ಆತಂಕ ಎದುರಾಗಿದೆ ಎಂದು ಅವರು ತಿಳಿಸಿದರು.
ಹಿಂದಿನ ದಿನಗಳಲ್ಲಿ ರಾಜಕಾರಣವನ್ನು ಪತ್ರಿಕೆಗಳು ನಿರ್ವಹಿಸುತ್ತಿದ್ದವು, ಆದರೆ ಇಂದಿನ ದಿನಗಳಲ್ಲಿ ರಾಜಕಾರಣವೇ ಪತ್ರಕರ್ತರನ್ನು ನಿಯಂತ್ರಿಸುವ ಕಾಲ ಬಂದೊದಗಿದೆ ಎಂದು ಬೇಸರಿಸಿದರು.
ಕನ್ನಡ ಪ್ರಭ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ‘ಧರ್ಮಸ್ಥಳದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆ ಬಗ್ಗೆ ಅಲ್ಲಿನ ಧರ್ಮಾಧಿಕಾರಿಗಳ ಸಹೋದರರೊಬ್ಬರು 350 ಕ್ಕೂ ಹೆಚ್ಚಿನ ಮಾಧ್ಯಮಗಳ ಬಗ್ಗೆ ಧಾವೆ ಹೂಡಿದ್ದು ಇವುಗಳಲ್ಲಿ 250 ಕ್ಕೂ ಹೆಚ್ಚು ಯೂಟ್ಯೂಬ್ ಚಾನಲ್ ಗಳೇ ಇವೆ, ಇದನ್ನು ಗಮನಿಸಿದಾಗ ನಮಗೆ ಮುದ್ರಣ ಮಾಧ್ಯಮದ ಮೇಲೆ ಅಪಾರವಾದ ನಂಬಿಕೆ ಉಳಿಯಲಿದೆ’ ಎಂದರು.
ಪತ್ರಕರ್ತರು ತಮ್ಮ ಜವಾಬ್ದಾರಿಗಳನ್ನರಿತು ಕೆಲಸ ನಿರ್ವಹಿಸಬೇಕು, ಅಂತಹವರಿಗೆ ಸಮಾಜದಲ್ಲಿ ಗೌರವ ದೊಡ್ಡಮಟ್ಟದಲ್ಲಿ ದೊರೆಯಲಿದೆ. ಪತ್ರಕರ್ತರು ಬರೆದ ಲೇಖನಗಳಿಂದ ಸಮಾಜಕ್ಕೆ ಒಳಿತಾಗುವಂತ ಕೆಲಸಗಳು ನಡೆಯಬೇಕು, ಅಂತಹ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿ ಈ ಸಮಾಜಕ್ಕೆ ಅಗತ್ಯವಿದೆ’ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಹಾಗೂ ಪತ್ರಕರ್ತರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕ ಸಂದೇಶ್, ನಟ ಚಂದನ್ ಶೆಟ್ಟಿ, ಪೋಷಕ ನಟ ಸುಂದರ್ ವೀಣಾ, ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಜಿಲ್ಲಾ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ತಾಲ್ಲೂಕು ಉಪಾಧ್ಯಕ್ಷ ಯಡತೊರೆ ಮಹೇಶ್, ಕಾರ್ಯದರ್ಶಿ ನಾಗಾರಾಂ, ಸಹ ಕಾರ್ಯದರ್ಶಿ ದೊಡ್ಡಸಿದ್ದು, ಖಜಾಂಚಿ ಮಂಜುಕೋಟೆ, ಸದಸ್ಯರಾದ ಸತೀಶ್ ಆರಾಧ್ಯ, ವಾಸುಕಿ ನಾಗೇಶ್, ಕನ್ನಡ ಪ್ರಮೋದ್, ಜಿ.ರವಿಕುಮಾರ್, ಆನಂದ, ಪುಟ್ಟರಾಜು, ಸುರೇಶ್, ಜಶೀಲಾ, ಎಂ.ಎಲ್. ರವಿಕುಮಾರ್, ರೇಣುಕಾ, ನಾಗೇಶ್, ಶರವಣ, ಶ್ರೀನಿಧಿ, ದಾಸೇಗೌಡ, ರಂಗರಾಜು, ಎಂ.ಎಲ್. ರವಿಕುಮಾರ್, ನಿಂಗಣ್ಣಕೋಟೆ, ರವಿಕುಮಾರ್ ಆರಾಧ್ಯ, ಚಂದ್ರು ಹಾದನೂರು ಇದ್ದರು.
ಶಾಸಕ ಅನಿಲ್ ರವರ ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ಮಾತನಾಡಿ ‘ಪತ್ರಕರ್ತರ ವೃತ್ತಿ ಜವಬ್ದಾರಿಯುತವಾದಂತದ್ದು, ಇದನ್ನು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿದಾಗ ಪತ್ರಕರ್ತರಿಗೆ ಮನ್ನಣೆ ದೊರೆಯಲಿದೆ, ಆದರೆ ಪತ್ರಿಕಾ ದಿನಾಚರಣೆಯಂತಹ ದಿನಗಳಲ್ಲಿ ಕುಟುಂಬ ಸಮೇತರಾಗಿ ಒತ್ತಡವಿಲ್ಲದೇ ಭಾಗವಹಿಸುವುದು ಆರೋಗ್ಯಕರವಾದ ಬೆಳವಣಿಗೆ ಎಂದರು.
ಪತ್ರಕರ್ತನಿಗೆ ಅವರದ್ದೇ ಆದ ಜವಾಬ್ದಾರಿಗಳು ಇರುತ್ತವೆ, ಅನೇಕ ಒತ್ತಡಗಳು ಇರುತ್ತವೆ, ಆದರೂ ಅದನ್ನೆಲ್ಲ ಮೆಟ್ಟಿನಿಂತು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದರು
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC