ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ವೈ.ಎನ್.ಹೊಸಕೋಟೆ: ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ಕೈಮಗ್ಗ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿರುವ ವೈ.ಎನ್.ಹೊಸಕೋಟೆ ನೇಕಾರರಿಗೆ ಮತ್ತೊಮ್ಮೆ ರಾಜ್ಯಮಟ್ಟದ ಉತ್ತಮ ನೇಕಾರ ಪ್ರಶಸ್ತಿ ದೊರೆತಿರುವುದು ನಮ್ಮ ವೃತ್ತಿಗೆ ದೊರೆತ ಗೌರವವಾಗಿದೆ ಎಂದು ಸ್ಥಳೀಯ ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ನೇಕಾರ ಎಂ.ವಿ.ಪ್ರಕಾಶ್ ಆಕರ್ಷಕ ರೇಷ್ಮೆ ಸೀರೆ ನೇಯುವ ಮೂಲಕ 2024–25 ನೇ ಸಾಲಿನ ರಾಜ್ಯಮಟ್ಟದ ಉತ್ತಮ ನೇಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿವರ್ಷ ರಾಜ್ಯಮಟ್ಟದಲ್ಲಿ ಉತ್ತಮ ನೇಕಾರರನ್ನು ಗುರ್ತಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಿದೆ. ಈ ವರ್ಷ ವೈ.ಎನ್.ಹೊಸಕೋಟೆಯ ಎಂ.ವಿ.ಪ್ರಕಾಶ್ ನೇಯ್ದಿರುವ ರೈನ್ ಬೋ ಕಳಾಂಜಲಿ ಎನ್ನುವ ಸೀರೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅವರಿಗೆ ರಾಜ್ಯ ಮಟ್ಟದ ಉತ್ತಮ ನೇಕಾರ ಪ್ರಶಸ್ತಿ ತಂದುಕೊಟ್ಟಿದೆ.
ಆಗಸ್ಟ್ 7 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿ ಪತ್ರ, ಫಲಕ ಮತ್ತು 25 ಸಾವಿರ ನಗದು ಹಣವನ್ನು ಪ್ರಶಸ್ತಿ ಒಳಗೊಂಡಿದೆ. ಹಾಗೂ ಮಾಸಿಕ 8 ಸಾವಿರ ರೂಗಳಂತೆ ವಾರ್ಷಿಕ 96 ಸಾವಿರ ರೂಗಳ ಮಾಶಾಸನವನ್ನು ಪ್ರಶಸ್ತಿ ವಿಜೇತರಿಗೆ ಜೀವಿತಾವಧಿಯವರೆಗೆ ನೀಡಲಾಗುತ್ತದೆ.
ಈ ಸೀರೆ ನೇಯಲು ಸುಮಾರು ಎರಡು ತಿಂಗಳು ಕಾಲಾವಧಿ ಬೇಕಾಗುತ್ತದೆ. ಜೊತೆಗೆ ೨೧ ಲಾಳಿಗಳ ಪೈಕಿ ಒಂದರಲ್ಲಿ ಸಿಲ್ವರ್ ಜರಿ, ಮತ್ತೊಂದರಲ್ಲಿ ಒನ್ ಗ್ರಾಂ ಗೋಲ್ಡ್ ಜರಿ ಸೇರಿದಂತೆ ವಿವಿಧ ಬಣ್ಣಗಳ ರೇಷ್ಮೆ ನೂಲು ಇರುತ್ತದೆ. ಸುಂದರವಾದ ಬಳ್ಳಿಗಳು, ರೈನ್ ಬೋ ಕಲರ್ ಗಳು ಮತ್ತು ಆನೆ ಮತ್ತು ನವಿಲುಗಳಿಂದ ಕೂಡಿ ಚಿತ್ತಾಕರ್ಷಕ ಸೀರೆ ಮೂಡಿ ಬಂದಿದೆ.
ಅತ್ಯಂತ ಶ್ರಮ ಮತ್ತು ನೈಪುಣ್ಯತೆಯಿಂದ ಕೂಡಿರುವ ಈ ಸೀರೆಯ ಬೆಲೆ ಸುಮಾರು 85 ಸಾವಿರ ಎಂದು ಅಂದಾಜಿಸಲಾಗಿದೆ. 2023 ನೇ ಸಾಲಿನಲ್ಲಿ ಇದೇ ವೈ.ಎನ್.ಹೊಸಕೋಟೆ ಗ್ರಾಮದ ಎಂ.ಜಯಕೀರ್ತಿರವರು ನೇಕಾರಿಕೆ ಮಾಡಿದ್ದ ರೈಸಿಂಗ್ ಬ್ರೋಕೆಟ್ ಸೀರೆಯು ಪ್ರಥಮ ಬಹುಮಾನದೊಂದಿಗೆ ರಾಜ್ಯ ಮಟ್ಟದ ಬಹುಮಾನವನ್ನು ತಂದುಕೊಟ್ಟಿತ್ತು.
ಗ್ರಾಮದ ನೇಕಾರರನ್ನು ಗುರ್ತಿಸಿ ರಾಜ್ಯ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ ಮತ್ತು ಸಂತೋಷ ವಿಷಯ. ಇದರಿಂದ ಮತ್ತಷ್ಟು ನೇಕಾರರಿಗೆ ಸ್ಫೂರ್ತಿ ದೊರೆಯುತ್ತದೆ. ಇಲ್ಲಿ ಅಪ್ಪಟ ಕೈಮಗ್ಗ ರೇಷ್ಮೆ ಸೀರೆಗ ಸೀರೆಗಳು ಲಭ್ಯ. ಆದರೆ ಬ್ರಾಂಡ್ ಇಲ್ಲ. ಜೊತೆಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಆದಾಗಿ ಇತ್ತೀಚೆಗೆ ಕೈಮಗ್ಗ ನೇಕಾರಿಕೆ ಕಡಿಮೆಯಾಗುತ್ತಿದೆ. ಆದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಳಿವಿನಂಚಿನಲ್ಲಿರುವ ರೇಷ್ಮೆ ಕೈಮಗ್ಗ ನೇಕಾರಿಕೆ ವೃತ್ತಿಯನ್ನು ಪುನಶ್ಚೇತನಗೊಳಿಸಲು ಪೂರಕ ಸವಲತ್ತುಗಳನ್ನು ಒದಗಿಸಿಕೊಡಬೇಕು ಎನ್ನುತ್ತಾರೆ ಸ್ಥಳೀಯ ನೇಕಾರರು.
ಈ ಸೀರೆಯನ್ನು ನೇಯಲು ಸುಮಾರು 60 ದಿನಗಳ ಕಾಲ ಶ್ರಮಿಸಿದ್ದೇನೆ. 21ಲಾಳಿಗಳಲ್ಲಿ ಕೈಯಿಂದ ಪ್ರತಿಯೊಂದು ಎಳೆಯನ್ನು ಕುಟ್ಟು ತಿರುವಿ ತೆಗೆದು ನೇಯುವುದರಿಂದ ಬಹಳ ಸಮಯ ಮತ್ತು ಶ್ರಮ ತೆಗೆದುಕೊಳ್ಳುತ್ತದೆ. ಪ್ರಶಸ್ತಿ ಪದೆದಿರುವ ಈ ಸೀರೆಯನ್ನು ನೇಯಲು ಅವಕಾಶ ಮಾಡಿಕೊಟ್ಟ ಗೋವರ್ಧನ್ ರವರಿಗೆ ಮತ್ತು ಪ್ರಶಸ್ತಿ ನೀಡಿದ ಜವಳಿ ಇಲಾಖೆಗೆ ನನ್ನ ಧನ್ಯವಾದಗಳು.
— ಎಂ.ವಿ.ಪ್ರಕಾಶ, ಪ್ರಶಸ್ತಿ ವಿಜೇತ ನೇಕಾರ, ವೈ.ಎನ್.ಹೊಸಕೋಟೆ
ಬಹಳ ವರ್ಷಗಳಿಂದ ಕೈಮಗ್ಗದ ರೇಷ್ಮೆ ಸೀರೆಗಳನ್ನು ಉತ್ಪಾದನೆ ಮಾಡಿಸುತ್ತಿದ್ದೇನೆ. ಆದರೆ ವಿಶೇಷವಾದ ಸೀರೆ ನಮ್ಮಲ್ಲಿ ಉತ್ಪಾದನೆಯಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಸಂಬಂದ ಸಾವಿರಾರು ರೂಪಾಯಿ ಹಣ ಮತ್ತು ಹಲವಾರು ತಿಂಗಳ ಮಾನಸಿಕ ಶ್ರಮ ವೆಚ್ಚ ಮಾಡಿ ಈ ರೈನ್ ಬೋ ಕಳಾಂಜಲಿ ಡಿಸೈನ್ ಸೀರೆಯನ್ನು ನೇಯಿಸಿದ್ದೇನೆ. ಕಷ್ಟಪಟ್ಟರೆ ಪ್ರತಿಫಲ ಉಂಟು ಎಂಬುದಕ್ಕೆ ಪ್ರಶಸ್ತಿ ದೊರೆತಿರುವುದು ಸಾಕ್ಷಿಯಾಗಿದೆ. ಇದರಿಂದ ನನಗೆ ಹೆಮ್ಮೆ ಎನಿಸುತ್ತಿದೆ.
— ಜೆ.ಗೋವರ್ಧನ್, ಡಿಸೈನರ್ ಮತ್ತು ಮಗ್ಗದ ಮಾಲಿಕ, ವೈ.ಎನ್.ಹೊಸಕೋಟೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC