ಸರಗೂರು: ನೂತನ ತಾಲೂಕು ಸರಗೂರಿನಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಶಾಸಕ ಅನಿಲ್ ಚಿಕ್ಕಮಾಧು ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಆದಿಕರ್ನಾಟಕ ಮಹಾಸಭಾ, ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್ ತಾಲೂಕು ಶಾಖೆಯಿಂದ ನಡೆದ 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಕೋಟೆ ತಾಲೂಕಿನಲ್ಲಿ ನಿರ್ಮಾಣಗೊಂಡ ಮಾದರಿಯಲ್ಲಿಯೇ ಸರಗೂರಿನಲ್ಲಿಯೂ ಭವನ ನಿರ್ಮಾಣಕ್ಕೆ ಮುಂದಾಗಲಾಗುವುದು. ಈಗಾಗಲೇ ನಿವೇಶನ ಕುರಿತ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದು, ಅತೀ ಶೀಘ್ರದಲ್ಲೆ ನಿವೇಶನ ಮಂಜೂರಾಗಲಿದೆ. ಜನಾಂಗದ ಬೇಡಿಕೆಯಂತೆ 10 ಕೋಟಿ ರೂ.ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರಲ್ಲಿ ಅನುದಾನಕ್ಕಾಗಿ ಮಾತುಕತೆ ನಡೆಸಲಾಗುವುದು. ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ಇರಲಿದೆ” ಎಂದು ಅವರು ತಿಳಿಸಿದರು.
ಸಮಾಜಕ್ಕಾಗಿ ಓದಿ: “ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಮಕ್ಕಳು ಅತ್ಯಂತ ಬುದ್ಧಿವಂತ ಮಕ್ಕಳು. ತಮಗಾಗಿ ಓದದೇ ಸಮಾಜದ ಏಳಿಗೆಗಾಗಿ ಓದಬೇಕು. ಅಂಬೇಡ್ಕರ್ ಅವರಂಥ ಬುದ್ಧಿಜೀವಿ ಭೂಮಿ ಮೇಲೆ ಯಾರು ಇಲ್ಲ. ಹೀಗಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ವೃತ್ತಯೊಂದಕ್ಕೆ ಅಂಬೇಡ್ಕರ್ ಹೆಸರು ಇಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಇದಲ್ಲದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕ್ರಮವಹಿಸಲಾಗುವುದು” ಎಂದರು.
“ಕೋಟೆ, ಸರಗೂರು ಅವಳಿ ತಾಲೂಕುಗಳಂತೆ ಆದಿ ಕರ್ನಾಟಕ ಮಹಾಸಭಾದವರು ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಮಾಡಿದರೆ ತುಂಬಾ ಖುಷಿಯಾಗಲಿದೆ. ಎಲ್ಲರೂ ಒಂದೆಡೆ ಸೇರಿದರೆ ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಮುನ್ನುಗ್ಗಬೇಕು. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು” ಎಂದು ಸಲಹೆ ನೀಡಿದರು.
ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಶಿವಣ್ಣ ಮಾತನಾಡಿ, “ ಸಮಾಜ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಆದಿ ಕರ್ನಾಟಕ ಮಹಾಸಭಾ, ಅಂಬೇಡ್ಕರ್ ಟ್ರಸ್ಟ್ ಒಗ್ಗೂಡಿ ಮಕ್ಕಳಿಗೆ ಉತ್ತಮವಾದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದು, ಓದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡುವಂಥ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ಜನಾಂಗದ ಸಂಪೂರ್ಣವಾಗಿ ಬೆಂಬಲ ನೀಡುತ್ತಾ ಬಂದಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಅಂತರಸಂತೆ ಸಾರಾನಾಥ ಬುದ್ಧವಿಹಾರದ ಗೌತಮಿ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಕೋಟೆ ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಹೈರಿಗೆ ಶಿವರಾಜು, ಪಟ್ಟಣ ಪಂಚಾಯಿತಿ ಸದಸ್ಯರಾದ ಚಲುವಕೃಷ್ಣ, ಚಂದ್ರಕಲಾ ರಾಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ನಿಂಗರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಲುವರಾಜು, ಅಂಬೇಡ್ಕರ್ ಟ್ರಸ್ಟ್ ನ ಅಧ್ಯಕ್ಷ ಚೆನ್ನಿಪುರ ಎನ್.ನಾಗರಾಜು, ಟೌನ್ ಅಧ್ಯಕ್ಷ ಸಣ್ಣಸ್ವಾಮಿ, ಗಡಿ ಯಜಮಾನ ರಂಗಯ್ಯ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಲಂಕೆ ರಮೇಶ್ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಸಹಳ್ಳಿ ನವೀನ್, ಪುಟ್ಟಸ್ವಾಮಿ, ಶಿವಚನ್ನಪ್ಪ,ತಾಪಂ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ,ಸೇರಿದಂತೆ ಸಮಾಜದ ಬಂಧುಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಶಿವರಾಜು, ಗೌರವಾಧ್ಯಕ್ಷ ಹುಣಸಹಳ್ಳಿ ಬಸವರಾಜು ಅವರನ್ನು ಅಭಿನಂದಿಸಲಾಯಿತು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


