ಸರಗೂರು: ತಾಲೂಕಿನ ಹುಸ್ಕೂರು ಹಾಡಿಗೆ ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆಯನ್ನು ಮಾಡಲಾಯಿತು.
ಸಮಿತಿಯ ಸಂಚಾಲಕ ಸುನಿಲ್ ಟಿ.ಆರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸಂಪೂರ್ಣವಾಗಿ ಅರಣ್ಯ ಒಳಗೆ ಇರುವ ಈ ಹಾಡಿಗೆ ಕನಿಷ್ಠಪಕ್ಷ ಬೆಳಿಗ್ಗೆ 8:30ಕ್ಕೆ ಹಾಡಿಯಿಂದ ಸರಗೂರಿಗೆ ಹೊರಡುವಂತೆ ಹಾಗೂ ಸಂಜೆ 4 ಗಂಟೆಗೆ ಸರಗೂರಿನಿಂದ ಹುಸ್ಕೂರು ಹಾಡಿಗೆ ಬರುವಂತೆ ಬಸ್ ವ್ಯವಸ್ಥೆ ಮಾಡಬೇಕು. ಈಗಾಗಲೇ ದಡದಹಳ್ಳಿ ಮಾರ್ಗವಾಗಿ ಹೋಗುವ ಬಸ್ ಇಲ್ಲಿಗೆ ಬಂದು ಹೋಗುವಂತೆ ಮಾಡಬೇಕು. ಈ ವಿಚಾರವಾಗಿ ಐಟಿಡಿಪಿ ಇಲಾಖೆ,ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಕಾರಣವಾಗಿದೆ. ಇದರಿಂದ ಬಡ ಆದಿವಾಸಿ ಜನರು ಹಾಗೂ ಅವರ ಮಕ್ಕಳು ಎಲ್ಲಾ ನಾಗರಿಕ ಸೌಲಭ್ಯ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ಹಂತದಲ್ಲಿ ಹುಸ್ಕೂರು ಹಾಡಿ ಜನರು ಸೇರಿ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಗುವುದು.
ಹಾಡಿಯ ಮುಖಂಡ ತಿರುಪತಿ ಮಾತನಾಡಿ, ಪ್ರತಿದಿನ ಆನೆ ಭಯದಿಂದ ನಡೆದುಕೊಂಡು ಬರುವುದು ಕಷ್ಟವಾಗುತ್ತಿದೆ. ಪ್ರತಿದಿನ ಆಟೋಗಳಿಗೆ ರೂ. 20 ಕೊಟ್ಟು ಓಡಾಡಬೇಕು. ನಡೆದುಕೊಂಡು ಬರುವಾಗ ಅನೇಕ ಬಾರಿ ಆನೆಗಳು ಎದುರಾಗಿದ್ದು ಹೆದರಿ ಓಡಲು ಪ್ರಯತ್ನಿಸಿ ಅಪಘಾತಗಳು ಆಗಿ ಕೈಕಾಲು ಮುರಿದುಕೊಂಡಿದ್ದಾರೆ. ನಾಲ್ಕೈದು ವರ್ಷಗಳಿಂದಲೂ ಸಹ ಬಸ್ ಬರದೇ ಪ್ರತಿದಿನ ಸಂಚಾರವೇ ಕಷ್ಟವಾಗಿದ್ದು ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದರು.
ಹಾಡಿಯ ಮುಖಂಡ ಬೈರ ಮಾತನಾಡಿ, ಸರಗೂರಿನ ಶಾಲೆಗೆ 18 ಮಕ್ಕಳು ಪ್ರತಿದಿನ 12 ಕಿಲೋಮೀಟರ್ ಮಕ್ಕಳು ದಿನಕ್ಕೆ 30ರೂ ನಂತೆ ತಿಂಗಳಿಗೆ 300ರಂತೆ ಪ್ರತಿವರ್ಷ 9000 ಖಾಸಗಿ ಆಟೋಗಳಿಗೆ ಹಣ ನೀಡಬೇಕು. ಪ್ರತಿದಿನ ಕೂಲಿ ಮಾಡಿದರೆ ಮಾತ್ರ ಅವರ ಜೀವನ ನಡೆಸಲು ಸಾಧ್ಯವಾಗುವಂತಹ ಪರಿಸ್ಥಿತಿ ಇರುವ ಬಡ ಆದಿವಾಸಿ ಜನರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವರ್ಷಕ್ಕೆ ಸಾವಿರಾರು ಹಣ ಖರ್ಚು ಮಾಡಿ ಶಾಲೆಗೆ ಕಳಿಸುವುದು ನಮ್ಮಂತ ಜನಗಳಿಗೆ ಬಹಳ ಕಷ್ಟ ಇನ್ನುಳಿದ 20 ಮಕ್ಕಳು ಹಾಡಿಯಿಂದ ಅರಣ್ಯದ ಅಂಚಿನಲ್ಲಿ ನಾಲ್ಕು ಕಿಲೋಮೀಟರ್ ದಡದಹಳ್ಳಿ ಶಾಲೆಗೆ ನಡೆದುಕೊಂಡೆ ಹೋಗಬೇಕು. ಆ ಮಕ್ಕಳು ಆಟೋ ಮಾಡಿ ಶಾಲೆಗೆ ಕಳಿಸುವ ಸಾಮರ್ಥ್ಯ ಪೋಷಕರಿಗೆಲ್ಲ ಹಾಗಾಗಿ ಪ್ರತಿ ವರ್ಷ 20 ಮಕ್ಕಳು 5ನೇ ತರಗತಿಯ ನಂತರ ವಿದ್ಯಾಭ್ಯಾಸದಿಂದ ವಂಚಿತರಾಗುವಂತಾಗಿದೆ. ಹುಸ್ಕೂರು ಹಾಡಿಯಲ್ಲಿ 5ನೇ ತರಗತಿಯವರೆಗೆ ಮಾತ್ರ ಇದೆ ಅಲ್ಲಿವರೆಗೆ ಮಾತ್ರ ಎಲ್ಲಾ ಮಕ್ಕಳನ್ನು ಓದಿಸಲು ಸಾಧ್ಯವಾಗುತ್ತಿದೆ. ಈ ಶಾಲೆಗೆ ಬರುವ ಶಿಕ್ಷಕರು ಓಡಾಡಲು ಸಹ ಸಮಸ್ಯೆ ಆಗುತ್ತಿದೆ ಎಂದರು.
ಹಾಡಿಯ ಮುಖಂಡರಾದ ಬುಂಡಮ್ಮ ಮಾತನಾಡಿ, ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿ ವರ್ಷಗಳೇ ಕಳೆದರು ಇದುವರೆಗೂ ಕೆಲಸ ಪ್ರಾರಂಭ ಮಾಡಿಲ್ಲ ಇದನ್ನೇ ನೆಪ ಮಾಡಿಕೊಂಡು ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಸ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮಗಳಿಗೆ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಜನರನ್ನು ಕರೆದುಕೊಂಡು ಹೋಗಲು ಇದೇ ಕೆಎಸ್ ಆರ್ ಟಿಸಿ ಬಸ್ ಗಳು ಇದೇ ರಸ್ತೆಯಲ್ಲಿ ಬಂದು ನಿಲ್ಲುತ್ತದೆ. ಅದಲ್ಲದೆ ಶಾಲೆ, ಅಂಗನವಾಡಿಗೆ ಬರುವ ಅಕ್ಕಿ ಸಾಗಿಸುವ ದೊಡ್ಡ ದೊಡ್ಡ ಲಾರಿಗಳೇ ಈ ರಸ್ತೆಯಲ್ಲಿ ಬಂದು ಹೋಗುತ್ತವೆ.ಆದರೂ ಸಹ ಹೆಗ್ಗಡದೇವನಕೋಟೆ ಡಿಪೋ ಅಧಿಕಾರಿಗಳು ರಸ್ತೆ ನೆಪ ಹೇಳುತ್ತಾ ಬಸ್ ಬಿಡದೆ ಸತಾಯಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಹುಸ್ಕೂರು ಹಾಡಿಯ ಮುಖಂಡರುಗಳಾದ ರತ್ನಮ್ಮ, ಬುಡಂಮ್ಮ, ನೂರಾಳಯ್ಯ, ಕುಳ್ಳಯ್ಯ,ನಿಂಗಯ್ಯ, ಚಾಮ,ಬೈರ, ಮಹೇಶ್, ಅಪ್ಪು, ನಿಂಗಯ್ಯ, ಸೋಮ, ತಿರುಪತಿ ಸೇರಿದಂತೆ ಹಾಡಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC