ಸರಗೂರು: ಗಣೇಶ ಹಾಗೂ ಬಕ್ರೀದ್ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಬೇಕು. ದೇವರ ಹೆಸರಿನಲ್ಲಿ ಪೈಪೋಟಿ, ನಿಯಮಬಾಹಿರ ಧ್ವನಿ ವರ್ಧಕ ಅಳವಡಿಕೆ, ಇಸ್ಪೀಟ್, ಜೂಜಾಟ ಸೇರಿ ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಂತಿಪಾಲನೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗೌರಿಗಣೇಶ ಹಾಗೂ ಬಕ್ರೀದ್ ಹಬ್ಬದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಉದ್ದೇಶಿಸಿ ಅವರು ಮಾತನಾಡಿದರು.
25 ಮತ್ತು 26 ರಂದು ನಡೆಯುವ ಗೌರಿ–ಗಣೇಶ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಅನ್ಯೂನ್ಯತೆಯಿಂದ ಹಬ್ಬ ಆಚರಿಸಬೇಕು, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಆಡಳಿತದಲ್ಲಿ, ಅಗ್ನಿಶಾಮಕ ಠಾಣೆ, ವಿದ್ಯುತ್ ಇಲಾಖೆ ಹಾಗೂ ಧ್ವನಿವರ್ಧಕ ಅಳವಡಿಸಲು ತಹಶೀಲ್ದಾರ್ ಅನುಮತಿ ಪಡೆದು ಪೊಲೀಸರು ನೀಡುವ ಸಲಹೆ ಸೂಚನೆ ಪಾಲಿಸಬೇಕು. ಅನುಮತಿ ನೀಡಲಾಗುವ ಸಮಯದಲ್ಲಿ ಗಣಪತಿ ವಿಸರ್ಜನೆ ಮಾಡಬೇಕು. ಗ್ರಾಮಗಳಲ್ಲಿ ಯಾವುದೇ ಸಂದರ್ಭದಲ್ಲಿ ಡಿಜೆ ಬಳಸಬಾರದು’ ಎಂದು ತಿಳಿಸಿದರು.
ಪಿಎಸ್ ಐ ಆರ್.ಕಿರಣ್ ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ಯಾವ ಊರುಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಮಾಡುತ್ತಾರೆ ಅನುಮತಿ ನೀಡಲಾಗುವುದು. ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ನಾಲ್ಕು ದಿನಗಳ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ಅಂತಹ ಮೂರ್ತಿಗಳಿಗೆ ಮಾತ್ರ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆ ಅನುಮತಿ ಪಡೆಯತಕ್ಕದ್ದು. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಕೆಇಬಿ ನಿಂದ ಪರವಾನಗಿ ಪಡೆಯಬೇಕು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ನಿಗದಿಪಡಿಸಿದ ದಿನದಂದು ಗಣೇಶ ವಿಸರ್ಜನೆ ಮಾಡಬೇಕು. ನಿಗದಿಪಡಿಸಿದ ರಸ್ತೆ ಮಾರ್ಗ ಬದಲಿಸಬಾರದು. ಖಾಸಗಿ ಬಾವಿಯಲ್ಲಿ ವಿಸರ್ಜನೆ ಮಾಡಬೇಕಾದರೆ, ಆ ಬಾವಿಯ ಮಾಲೀಕರ ಅನುಮತಿ ಪಡೆದಿರಬೇಕು. ಅಶ್ಲೀಲ ಹಾಡು, ನತ್ಯ ಕಾರ್ಯಕ್ರಮಗಳು ನಡೆದಲ್ಲಿ ಸಂಬಂಧಪಟ್ಟ ಸಂಘ–ಸಂಸ್ಥೆಯ ಪದಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕೋಮುಸೌಹಾರ್ದತೆಗೆ ಧಕ್ಕೆ ತರುವ ಹಾಡುಗಳನ್ನು ಹಾಕಬಾರದು ಎಂದರು.
ಈ ಸಂದರ್ಭದಲ್ಲಿ ಕ್ರೈಂ ಬ್ರಾಂಚ್ ಇನ್ ಸ್ಪೆಕ್ಟರ್ ಗೋಪಾಲ್, ಪಪಂ ಸದಸ್ಯ ಶ್ರೀನಿವಾಸ, ಪೊಲೀಸ್ ಠಾಣೆಯ ಸಿಬ್ಬಂದಿ ಪುರುಷೋತ್ತಮ್, ಕೃಷ್ಣಕುಮಾರ್, ಶಿವಕುಮಾರ್, ನಾರಾಯಣ, ಇಮ್ರಾನ್, ಜಗದೀಶ್, ಕೃಷ್ಣಯ್ಯ, ಶಿವರಾಜು, ದೇವರಾಜು, ಶೋಭಾ, ಉಷಾ, ಮಹಾದೇವಮ್ಮ, ಸುನೀಲ್, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC