ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ನೀಡಿರುವ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿ, ರಾಜ್ಯ ಸರ್ಕಾರ ಆ.16ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಡಿಎಸ್ ಎಸ್ ತಾ.ಸಂಚಾಲಕ ಡಿ.ಎಲ್.ಶಿವರಾಮ್ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರವು ಆಯೋಗವನ್ನು ರಚಿಸಿ ವರದಿಯನ್ನು ಸ್ವೀಕರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನು ವಿಳಂಬ ಮಾಡದೆ, ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಈಗಾಗಲೇ ಅನೇಕ ಕೂಗುಗಳು ಕೇಳಿ ಬರುತ್ತಿವೆ. ನಾಗಮೋಹನ್ ದಾಸ್ ರವರ ವರದಿಯ ಆಧಾರದ ಮೇಲೆ ಒಳಮೀಸಲಾತಿಯನ್ನು ಅಂಗೀಕರಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವರಾದ ಡಾ.ಜಿ.ಪರಮೇಶ್ವರ್, ಮಹದೇವಪ್ಪನವರು ಒಳಮೀಸಲಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ ಜಾರಿಗೊಳಿಸುವುದರ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಹೇಳಿದರು.
ಮೀಸಲಾತಿ ಜಾರಿಗೆ ಜನಾಂದೋಲನ, ಪ್ರತಿಭಟನೆ, ತಮಟೆ ಚಳುವಳಿಯ ಮೂಲಕ ಹಲವು ಹೋರಾಟಗಳನ್ನು ಮಾಡಿದ್ದೇವೆ. ಬಲಗೈ ಜನಾಂಗದ ಸಹೋದರರು ಮೈಸೂರಿನ ಉರಿಲಿಂಗಿ ಪೆದ್ದ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮುಖಾಂತರ ಒಳಮೀಸಲಾತಿ ಜಾರಿಗೆ ವಿವಿಧಾತ್ಮಕ ಹೇಳಿಕೆ ನೀಡಿದ್ದಾರೆ, ಇದು ತರವಲ್ಲ. ದತ್ತಾಂಶಗಳ ವರದಿ ಆಧಾರದ ಮೇಲೆ ಮೀಸಲಾತಿ ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಆಯಾ ರಾಜ್ಯ ಸರ್ಕಾರ ಪ.ಜಾತಿಯ ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೊರ ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಗೆ ಬಂದಿದೆ. ಚುನಾವಣೆಯ ಪ್ರಣಾಳಿಕೆಯಲ್ಲಿ ಅಂಶಗಳಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಳ ಮೀಸಲಾತಿ ಜಾರಿಗೆ ಬಂದಿಲ್ಲಾ ಎಂದು ಆರೋಪ ಮಾಡಿದರು.
ರಾಜ್ಯ ಸರ್ಕಾರ ರಚಿಸಿದ ಆಯೋಗದ ವರದಿಯಲ್ಲಿ ಮಾದಿಗ ಸಮುದಾಯವು 18ಜಾತಿಗಳ ಸಂಖೈಯಲ್ಲಿ ಬಹುಸಂಖ್ಯಾತರಾಗಿದ್ದಾರೆ.
ರಾಜ್ಯದಲ್ಲಿ ಮಾದಿಗ ಜನಾಂಗದ ಜನಸಂಖೈ 27 ಲಕ್ಷ ಇದೆ. ಛಲವಾದಿ ಜನಸಂಖೈ ಕಡಿಮೆ ಇರುವ ಕಾರಣ ಬಲಗೈ ಸಮುದಾಯದ ಜನರು ಸಹಿಸದೆ ಮೈಸೂರಿನ ಪೆದ್ದ ಮಠದ ಶ್ರೀಗಳ ಕಡೆಯಿಂದ ‘‘ಮಾದಿಗರು ಅಂಬೇಡ್ಕರ್ ವಾದಿಗಳಲ್ಲ’’ ಎಂಬ ಮಾತನ್ನು ಹೇಳಿಸುತ್ತಿದ್ದಾರೆ. ನಾಗಮೋಹನ್ ದಾಸ್ ವರದಿಯ ಪ್ರತಿಯನ್ನು ಸುಟ್ಟು ಒಳಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ದೊಡ್ಡಯ್ಯ ವಿಭಾಗೀಯ ಸಂಚಾಲಕ, ಜಿಲ್ಲಾ ಸಂಘಟನಾ ಸಂಚಾಲಕ ಗಂಗಣ್ಣ, ಮುಖಂಡರಾದ ಮಂಜುನಾಥ್, ಸಿದ್ದಗಂಗಯ್ಯ, ವೆಂಕಟಸ್ವಾಮಿ, ಹರೀಶ್‌ಬಾಬು, ನರಸಿಂಹಮೂರ್ತಿ, ಶಿವರಾಜು, ವೀರಕ್ಯಾತರಾಯ್ಯ, ಸುಬ್ಬಣ್ಣ, ದೊಡ್ಡಯ್ಯ, ನಾಗರಾಜು, ಭೀಮರಾಜು,ಲಕ್ಷ್ಮಿನರಸಯ್ಯ ಸೇರಿದಂತೆ ಇತರರು ಇದ್ದರು.
ಸಮ ಸಮಾಜ ನಿರ್ಮಾಣಕ್ಕೆ ತಳಮಟ್ಟದ ಪ್ರತಿ ಸಮುದಾಯ ಜನರಿಗೆ ಒಳ ಮೀಸಲಾತಿ ಅವಶ್ಯಕತೆಯಿದೆ ಎಂದು ಅಂಬೇಡ್ಕರ್‌ರವರು ಒಪ್ಪಿಗೆ ನೀಡಿದ್ದರು, ಅಂಬೇಡ್ಕರ್ ವಾದಿಗಳು ಯಾರೆಂಬುದು ಶ್ರೀಗಳಿಂದ ಬಂದ ಮಾತುಗಳೇ ಸಾಕ್ಷಿ. ಆ.16 ರಂದು ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಯ ತೀರ್ಮಾನದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಮಹದೇವಪ್ಪ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ ನಮ್ಮ ಮಾದಿಗ ಸಮುದಾಯ.
— ದಾಡಿ ವೆಂಕಟೇಶ್, ದಲಿತ ಮುಖಂಡ.
ಚುನಾವಣೆಯ ಪ್ರಣಾಳಿಕೆಯ ಅಧ್ಯಕ್ಷೆತೆ ವಹಿಸಿದ್ದ ಡಾ.ಜಿ.ಪರಮೇಶ್ವರ್ ರವರು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಪ.ಜಾತಿ ದತ್ತಾಂಶ ಸಂಗ್ರಹಣೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶ ಸಂಗ್ರಹಣೆ ಮಾಡಿದೆ. ಮೈಸೂರಿನ ಪೆದ್ದ ಮಠದ ಶ್ರೀಗಳು ಸಮುದಾಯದ ವಿರುದ್ಧ ನೀಡಿರುವ ಹೇಳಿಕೆ ಹಿಂಪಡೆಯಬೇಕು. ದತ್ತಾಂಶ ಸಂಗ್ರಹಣೆಯ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತರಬೇಕಿದೆ.
— ಜೆಟ್ಟಿ ಅಗ್ರಹಾರ ನಾಗರಾಜು, ರಾಜ್ಯ ಸಂಚಾಲಕ, ದಲಿತ ಸಂರಕ್ಷಣಾ ಸಮಿತಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC