ಕೊರಟಗೆರೆ : ಮಾದಿಗ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಗುರುತಿಸಿ ಜನಾಂದೋಲನ ಸೃಷ್ಠಿಸಿ ಮತ ಜಾಗೃತಿ ಅಂದೋಲನ ಮಾಡಲಿದ್ದೇವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಅಭ್ಯರ್ಥಿಗಳು ಒಳಮೀಸಲಾತಿ ಪರವಾಗಿ ಧ್ವನಿ ಎತ್ತದಿದ್ದರೆ, ಆ ಶಾಸಕರನ್ನು ಚುನಾವಣೆಯಲ್ಲಿ ಸೋಲಿಸಲು ದೃಢ ನಿರ್ಧಾರ ಮಾಡಿದ್ದೇವೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಗೌರವಾಧ್ಯಕ್ಷ ಕೇಶವಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಸ್ವಾಭಿಮಾನದ ಒಕ್ಕೂಟದಿಂದ ಆಯೋಜಿಸಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆ.19ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತುರ್ತಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ಸಣ್ಣ ಉಪ ಸಮಿತಿ ರಚಿಸಿ ಕೇವಲ 3—4 ದಿನಗಳಲ್ಲಿ ಎಲ್ಲಾ ಸಮುದಾಯಗಳ ಅಹವಾಲು ಸ್ವೀಕರಿಸಿ ನಾಗಮೋಹನ್ ದಾಸ್ ರವರ ಪ.ಜಾತಿ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಜಾರಿಗೊಳಿಸಬೇಕು. ತಮಿಳುನಾಡು ಮಾದರಿಯಲ್ಲಿ ಸದಾಶಿವ ಆಯೋಗ, ನಾಗಮೋಹನ್‌ದಾಸ್ ವರದಿಯ ಆಧಾರದ ಮೇಲೆ ಮಾದಿಗ ಸಮುದಾಯಕ್ಕೆ 6% ಮೀಸಲಾತಿ ನೀಡಬೇಕು ಎಂದು ಹೇಳಿದರು.
ವಿಶ್ವ ಆದಿ ಜಾಂಬವ ಸಂಘ ರಾಜ್ಯಾಧ್ಯಕ್ಷ ಡಾ.ಭೀಮರಾಜ್ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯ ಆಧಾರದ ಮೇಲೆ ಮಾದಿಗ ಸಮುದಾಯದ ಜನಸಂಖೈ ರಾಜ್ಯದಲ್ಲಿ ಹೆಚ್ಚಳವಾಗಿದೆ. ಮೀಸಲಾತಿ ನೀಡದಂತೆ ಛಲವಾದಿ ಸಮುದಾಯ ರಾಜ್ಯ ಸರ್ಕಾರದ ಮೇಲೆ ಒತ್ತಡ ಏರುತ್ತಿರುವುದು ಶೋಭೆ ತರುವುದಿಲ್ಲ. ಒಳ ಮೀಸಲಾತಿಗಾಗಿ 30 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಜಾರಿಯಾಗಬೇಕು ಎಂದು ಹೇಳಿದರು.
ಎಂಆರ್ ಎಚ್ ಎಸ್ ಜಿಲ್ಲಾಧ್ಯಕ್ಷ ಸಿದ್ದಗಂಗಯ್ಯ ಮಾತನಾಡಿ, ಮಾದಿಗ ಮತ್ತು ಹೊಲೆಯ ಸಮುದಾಯಕ್ಕೆ ಎಲ್ಲಾ ವಿಧದಿಂದಲೂ ಅನ್ಯಾಯವಾಗಿದೆ. ಸಮುದಾಯಗಳ ಹಲವಾರು ವರದಿಗಳು ರಾಜ್ಯ ಸರ್ಕಾರ ಕೈಯಲ್ಲಿದೆ. ಮಾದಿಗ ಸಮುದಾಯಕ್ಕೆ ಆದಂತಹ ಅನ್ಯಾಯದ ಬಗ್ಗೆ ಸಮುದಾಯಕ್ಕೆ ತಿಳಿದರೆ ರಾಜ್ಯದಲ್ಲಿ ಬೃಹತ್ ಮಟ್ಟದ ಹೋರಾಟವೇ ನಡೆಯುತ್ತೇ, ಗೃಹ ಸಚಿವ ಡಾ.ಜಿ ಪರಮೇಶ್ವರ್, ನಾರಾಯಣಸ್ವಾಮಿ ಅವರು ಸ್ವ ಇಚ್ಛೆ ಹೇಳಿಕೆ ನೀಡುವುದನ್ನು ನಿಲ್ಲಿಸಿ ಒಳ ಮೀಸಲಾತಿ ಜಾರಿಗೆ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಅವಶ್ಯಕತೆಯಿದೆ. ಮೀಸಲಾತಿಗಾಗಿ 35 ವರ್ಷದ ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಸಮುದಾಯದ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸುಪ್ರಿಂಕೋರ್ಟ್ ತೀರ್ಪು ಮತ್ತು ನ್ಯಾಯಮೂರ್ತಿಗಳ ವರದಿಯ ಆಧಾರದ ಮೇಲೆ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕಿದೆ ಎಂದು ಹೇಳಿದರು.
ಈ ವೇಳೆ ದಲಿತ ಮುಖಂಡ ದಾಡಿ ವೆಂಕಟೇಶ್, ಶಿವರಾಮಣ್ಣ, ಗೋವಿಂದರಾಜು, ರಘು ಡಿ.ಎನ್., ಗಂಗಣ್ಣ, ರಾಜು, ಶಿವಣ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC