ಕೊರಟಗೆರೆ : ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯದ ಎಲ್ಲಾ 36,000 ಮುಜರಾಯಿ ದೇವಾಲಯಗಳಲ್ಲಿ 2025ರ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗಾಗಿ ಈ ಕ್ರಮವನ್ನು ಘನ ಸರ್ಕಾರ ಕೈಗೊಳ್ಳಲಾಗಿದ್ದು, ಪ್ಲಾಸ್ಟಿಕ್ ಲೋಟ, ತಟ್ಟೆ, ಬ್ಯಾಗ್ ಗಳು ಮತ್ತು ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ನಿಯಮವನ್ನು ಉಲ್ಲಂಘಿಸಿದರೆ ದೇವಾಲಯಗಳ ಆಡಳಿತ ಮಂಡಳಿಯು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊರಟಗೆರೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ತಿಳಿಸಿದ್ದಾರೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಸ್ಯಕಾಶಿ, ಸಿದ್ದರ ತಪೋವನ, ಆಯುರ್ವೇದಿಕ್ ಔಷಧಿಗಳ ದಿವ್ಯತಾಣವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಾಲಯದ ಅವರಣದಲ್ಲಿ ಇರುವಂತಹ ಅಂಗಡಿ ಮುಂಗಟ್ಟುಗಳು,ಹೋಟೆಲ್ ಗಳು, ಟೀ ಅಂಗಡಿಗಳು, ಪೂಜಾ ಸಾಮಗ್ರಿಗಳ ಅಂಗಡಿಗಳಿಗೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ :
ಪ್ಲಾಸ್ಟಿಕ್ ತ್ಯಾಜ್ಯದ ಅಪಾಯಗಳನ್ನು ಕಡಿಮೆ ಮಾಡಿ, ಪರಿಸರವನ್ನು ಸ್ವಚ್ಛವಾಗಿಡಲು ರಾಜ್ಯ ಸರ್ಕಾರವು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಸದುದ್ದೇಶ:
ಮುಜರಾಯಿ ದೇವಾಲಯಗಳ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಡೆಗಟ್ಟುವ ಮೂಲಕ ಸ್ವಚ್ಛತೆಯನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಯಾವ ಯಾವ. ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ..?
ಪ್ಲಾಸ್ಟಿಕ್ ಲೋಟಗಳು,ಪ್ಲಾಸ್ಟಿಕ್ ತಟ್ಟೆಗಳು, ಪ್ಲಾಸ್ಟಿಕ್ ಬೌಲ್‌ಗಳು, ಪ್ಲಾಸ್ಟಿಕ್ ಬ್ಯಾಗ್ ಗಳು, ಪೂಜಾ ಕಾರ್ಯಕ್ರಮಗಳಿಗೆ ಬಳಸುವ ಪ್ಲಾಸ್ಟಿಕ್ ಬಿಂದಿಗೆ, ಜಗ್, ಮತ್ತು ಲಕೋಟೆಗಳನ್ನು ಸೇರಿದಂತೆ ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ.
ನಾಗರಿಕರಿಗೆ, ಭಕ್ತರಿಗೆ ಸೂಚನೆಗಳು:
ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾದಿಗಳು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿತುಕೊಂಡು, ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು. ಪ್ರಸಾದ ವಿತರಣೆಗೆ ಪ್ಲಾಸ್ಟಿಕ್ ತಟ್ಟೆಗಳ ಬದಲಿಗೆ ಪರ್ಯಾಯ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗುವುದು. ಭಕ್ತಾದಿಗಳು ಪ್ಲಾಸ್ಟಿಕ್ ಬದಲು ತಮ್ಮ ಸ್ವಂತ ಚೀಲಗಳನ್ನು ತರಲು ಪ್ರೋತ್ಸಾಹಿಸಲಾಗುತ್ತದೆ.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎ.ಜಿ.ರಾಜು, ಆರ್.ಐ.ಪ್ರತಾಪ್, ಗ್ರಾಮ ಆಡಳಿತಾಧಿಕಾರಿಗಳಾದ ರಮೇಶ್, ನಾಗಶ್ರೀ, ಮುಜರಾಯಿ ಸಿಬ್ಬಂದಿಗಳಾದ ಸೌಭಾಗ್ಯಮ್ಮ, ಸತ್ಯನಾರಾಯಣ ಸೇರಿದಂತೆ ಗ್ರಾಮಸ್ಥರು ಭಕ್ತರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC