ಸರಗೂರು: ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರಗೂರು ಹೋಬಳಿ ರಾಜಸ್ವ ನಿರೀಕ್ಷಕ ರವಿಚಂದ್ರನ್ ತಿಳಿಸಿದರು.
ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಪೌತೆ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೌತಿ ಖಾತೆ ಆಂದೋಲನ ನಡೆಸುವ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಿದ್ದು, ಎಲ್ಲರೂ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಜಮೀನು ಮಾಲೀಕ ಮರಣ ಹೊಂದಿದ್ದರೆ, ಜಮೀನಿನ ವಾರಸುದಾರರಾಗಿ ಕುಟುಂಬದ ಸದಸ್ಯರಿಗೆ ಹಕ್ಕು ಪಡೆಯಲು ಪೌತಿ ಖಾತೆ ಸಹಕಾರಿಯಾಗಿದೆ. ಸರಕಾರ ಈಗಾಗಲೇ ಸರಕಾರದ ಸೌಲಭ್ಯ ಪಡೆಯುವುದಕ್ಕಾಗಿ ಜಮೀನಿನ ಮಾಲೀಕರ ಪಹಣಿಗೆ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಪುರುಷೋತ್ತಮ್ ಮಾತನಾಡಿ, ಪೌತಿ ಖಾತೆಗೆ ಮೃತ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ, ಗ್ರಾಮದ ಮಹಜರ್ ವರದಿ, ವಂಶವೃಕ್ಷ ಅಗತ್ಯ. ಖಾತಾ ಆಂದೋಲನದಿಂದ ಆಸ್ತಿಯ ಎಲ್ಲ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ನಕಲಿ ಆಗುವುದನ್ನು ತಪ್ಪಿಸಬಹುದು. ತಂತ್ರಾಂಶದ ಮೂಲಕ ಆಧಾರ್ ಇಕೆವೈಸಿ ಪಡೆಯುವುದರಿಂದ ಎಂ.ಆರ್. ಪ್ರಕ್ರಿಯೆ ಮುಗಿದ ಬಳಿಕ ಸ್ವಯಂ ಚಾಲಿತವಾಗಿ ಪಹಣಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ ಸಿ ತಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಚಂದ್ರ, ಮುಖಂಡರು ಭವನೇಶ್, ಶಿವಪ್ಪ, ಪುಟ್ಟರಾಜು, ಇನ್ನೂ ಮುಖಂಡರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


