ತುಮಕೂರು ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಭಾವನಾತ್ಮಕ ಯಾತನೆಯಂತಹ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಮಾಲೋಚನೆ, ಕಾನೂನು ನೆರವು ಮತ್ತು ಮಾರ್ಗದರ್ಶನ ನೀಡಲು ಜಿಲ್ಲಾಸ್ಪತ್ರೆಯ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಲಾಗಿದೆ.
ಮಹಿಳಾ ಸಹಾಯವಾಣಿ ಸಂಖ್ಯೆ 181 ದಿನದ 20 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಈ ಸಂಖ್ಯೆಗೆ ದೂರು ನೀಡಬಹುದಾಗಿದೆ. ಈ ಸಹಾಯವಾಣಿಯು ರಾಷ್ಟ್ರೀಯ ಮಹಿಳಾ ಆಯೋಗವು ಒದಗಿಸುವ ಒಂದು ಪ್ರಮುಖ ಸೇವೆಯಾಗಿದ್ದು, ವಿವಿಧ ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಸಹಾಯ ಮತ್ತು ಬೆಂಬಲವನ್ನು ನೀಡಲಿದೆ.
ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿರುವ ಮಹಿಳೆಯರನ್ನು ಪೊಲೀಸ್ ಸೇವೆ, ಒನ್ ಸ್ಟಾಪ್ ಸೆಂಟರ್, ಆಸ್ಪತ್ರೆ, ಕಾನೂನು ಸೇವೆಗಳ ಪ್ರಾಧಿಕಾರ ಮುಂತಾದ ಸೂಕ್ತ ಪಾಧಿಕಾರಗಳ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವುದರೊಂದಿಗೆ ದಿನದ 24 ಗಂಟೆಗಳೂ ತುರ್ತು ಮತ್ತು ತುರ್ತು ರಹಿತ ಪ್ರತಿಕ್ರಿಯೆಗಳನ್ನು ಒದಗಿಸುವ ಗುರಿಯನ್ನು ಈ ಮಹಿಳಾ ಸಹಾಯವಾಣಿ ಸಂಖ್ಯೆ ಹೊಂದಿದೆ.
ಈ ಸಹಾಯವಾಣಿಯು ಮಹಿಳಾ ಕಲ್ಯಾಣದ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಸೇವೆಯನ್ನು ಒದಗಿಸಲಿದೆ.
ವೈಯಕ್ತಿಕ ಬಿಕ್ಕಟ್ಟುಗಳನ್ನು ನಿಭಾಯಿಸುವಾಗ ಅಥವಾ ಕಾನೂನು ಸಲಹೆಯ ಅಗತ್ಯವಿದ್ದಲ್ಲಿ ಸಹಾಯವಾಣಿ ಅಗತ್ಯವಿರುವ ಮಹಿಳೆಯರಿಗೆ ಯಾವುದೇ ಸಮಯದಲ್ಲಿ ನೆರವು ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC