ಔರಾದ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ನಡೆಸಲಾಗಿದೆ ಅಂತ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ವೇದಿಕೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಇಂದು ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಲ್ಲಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸರ್ಕಾರ, ತಾಲೂಕು ಪಂಚಾಯತ್ ಔರಾದ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಔರಾದರವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯವರು ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ಶಿಕ್ಷಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಫೋಟೋಗಳು ಹಾಕದೆ ಕೇವಲ ಸ್ಥಳೀಯ ಶಾಸಕ ಪ್ರಭು ಚೌಹಾಣ್ ಅವರ ಭಾವಚಿತ್ರ ಹಾಕಿದ್ದಾರೆ. ಈ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ ಕೊಳ್ಳುರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಭು ಚೌಹಾಣ್ ಮಧ್ಯಸ್ಥಿಕೆ ವಹಿಸಿ, “ಅಮ್ಮ.., ಇದು ನಾನು ಸ್ವಂತ ಹಣದಿಂದ ಮಾಡುತ್ತಿರುವ ಕಾರ್ಯಕ್ರಮ ನೀವ್ಯಾರು ಪ್ರಶ್ನಿಸುವವರು? ಎಂದು ಏರು ಧ್ವನಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರಾದ ಸುಧಾಕರ್ ಕೊಳ್ಳುರ ಅವರ ನಡುವೆ ಮಾತಿನ ಚಕಮುಕಿ ನಡೆಯಿತು.
ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ್ ಮಿತ್ರ, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾದ ಚಂದು ಡಿ.ಕೆ., ಕಾಂಗ್ರೆಸ್ ಪ್ರಶಿಷ್ಟ ಪಂಗಡ ವಿಭಾಗದ ತಾಲೂಕ ಅಧ್ಯಕ್ಷರಾದ ರಾಜು ಮುದ್ದಾಳೆ, ರತ್ನದಿ ಕಸ್ತೂರಿ, ಮಾರುತಿ ಸೂರ್ಯವಂಶಿ, ಆನಂದ್ ಕಾಂಬಳೆ, ರಾಹುಲ್ ಜಾದವ್, ಅನಿಲ್ ಒಡಿಯಾರ, ಸೂರ್ಯಕಾಂತ್ ಕಾಂಬ್ಳೆ ಮುಂತಾದರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC