ತುಮಕೂರು: ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದ ವಿವಿಧೆಡೆ ಅಳವಡಿಸಿರುವ ಪ್ಲೆಕ್ಸ್‌ಗಳಲ್ಲಿ ಶಾಸಕ ಕೆ.ಎನ್.ರಾಜಣ್ಣ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಭಾವಚಿತ್ರ ಹಾಕದಿರುವುದಕ್ಕೆ ವಾಲ್ಮೀಕಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಮುಖಂಡ ಕುಳ್ಳೂರು ಶ್ರೀಧರ್ ಮಾತನಾಡಿ, ಶಾಸಕರ ಭಾವಚಿತ್ರ ಕೈಬಿಟ್ಟಿರುವುದನ್ನು ಖಂಡಿಸಿದರು.
ವಾಲ್ಮೀಕಿ ಅಧ್ಯಯನ ಪೀಠಕ್ಕೆ 10 ಎಕರೆ ಜಾಗ ಗುರುತಿಸಿ, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ತೆರೆಯುವಂತೆ 2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಈ ನಿಟ್ಟಿನಲ್ಲಿ ಏನು ಬೆಳವಣಿಗೆಯಾಗಿದೆ ಎಂಬ ಮಾಹಿತಿಯೇ ಇಲ್ಲ. ಜಯಂತಿಯ ಒಳಗೆ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
‘ಪ್ರಸ್ತುತ ಜಯಂತಿ ಪ್ರಯುಕ್ತ ಕೇವಲ ಇಬ್ಬರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು 10ಕ್ಕೆ ಹೆಚ್ಚಿಸಬೇಕು. ಕನಿಷ್ಠ ತಾಲ್ಲೂಕಿಗೆ ಒಬ್ಬರಂತೆ 10 ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು. ಜಯಂತಿ ದಿನ ಟೌನ್‌ಹಾಲ್ ವೃತ್ತದ ಅಂಬೇಡ್ಕರ್ ಪ್ರತಿಮೆಯಿಂದ ಬಾಲ ಭವನದವರೆಗೆ ಮೆರವಣಿಗೆ ನಡೆಸಬೇಕು’ ಎಂದು ಮುಖಂಡರು ಒತ್ತಾಯಿಸಿದರು.
`ಕೈ ತಪ್ಪಿನಿಂದ ಆಗಿದೆ. ಕೂಡಲೇ ಗಮನಿಸಿ, ಎಲ್ಲ ಜನಪ್ರತಿನಿಧಿಗಳ ಚಿತ್ರಗಳು ಬರುವಂತೆ ನೋಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಪಷ್ಟಪಡಿಸಿದರು. ಸೆ. 26ರಂದು ವಾಲ್ಮೀಕಿ ಸಮುದಾಯದ ಕುಂದು ಕೊರತೆ ಸಭೆ ನಡೆಸಲಾಗುವುದು. ಅಗತ್ಯ ತಯಾರಿ ಮಾಡಿಕೊಳ್ಳುವಂತೆ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC