ತುಮಕೂರು: ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿರುವ ತುಮಕೂರು ದಸರಾಗೆ ಸೆ. 22ರಂದು ಚಾಲನೆ ನೀಡಲಾಗುತ್ತದೆ. ದಸರಾ ಉತ್ಸವಕ್ಕೆ ಆಗಮಿಸುವ ಜನರಿಗಾಗಿ ಜಿಲ್ಲೆಯಾದ್ಯಂತ ಪ್ರತಿ ದಿನ 250 ವಿಶೇಷ ಬಸ್ ಗಳು ಸಂಚರಿಸಲಿವೆ.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 11 ದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಅ. 2ರಂದು ನಡೆಯಲಿರುವ ಜಂಬೂ ಸವಾರಿಯಲ್ಲಿ 50 ಗ್ರಾಮ ದೇವತೆಗಳು ಸಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.
ದಸರಾ ಉತ್ಸವದ ಮೊದಲ ದಿನ ಸರ್ವೋದಯ ಪ್ರೌಢಶಾಲೆ ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಹಾಟ್ ಏರ್ ಬಲೂನ್, ವಿಶ್ವವಿದ್ಯಾಲಯ ಹೆಲಿಪ್ಯಾಡ್ ನಲ್ಲಿ ಬೆಳಿಗ್ಗೆ 10.30 ಗಂಟೆಗೆ ಹೆಲಿ ರೈಡ್ ಗೆ ಚಾಲನೆ ಸಿಗಲಿದೆ. ಸಂಜೆ 4.30 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ. 27ರಂದು ಫಲಪುಷ್ಪ, ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ, ಆಹಾರ ಮೇಳ, ಮಹಿಳಾ ಕೌಶಲ ಮೇಳ ಮತ್ತು ಮಹಿಳೆಯರ ಬೈಕ್ ರೈಡ್ ಏರ್ಪಡಿಸಲಾಗಿದೆ. 30ರಂದು ಸಂಜೆ 6.15 ಗಂಟೆ ನಡೆಯುವ ಕಾರ್ಯಕ್ರಮದಲ್ಲಿ ನಟ ವಿ.ರವಿಚಂದ್ರನ್, ನಟಿ ರಮ್ಯಾ ಭಾಗವಹಿಸಲಿದ್ದಾರೆ. ಅ. 1ರಂದು ಆಯುಧ ಪೂಜೆ ಪ್ರಯುಕ್ತ 2,500 ಆಟೊಗಳ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಜ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC