ಕುಮಟಾ: ಕರ್ನಾಟಕ ರಣಧೀರ ವೇದಿಕೆ ಕುಮಟಾ ಹಾಗೂ ಭಟ್ಕಳ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಕುಮಟಾದ ಮಿರ್ಜಾನ್ ನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮಕ್ಕೆ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ಜೊತೆಗೆ ರಾಜ್ಯ ಸಮಿತಿಯ ಹಲವು ಸದಸ್ಯರು ಬೆಂಗಳೂರಿನಿಂದ ಆಗಮಿಸಿದ್ದರು. ಮಹೇಶ್ ಗೌಡ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಕುಮಾರಿ ಸುಪ್ರಿಯಾ ವಿಷ್ಣು ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ನಮಗೆ ಸದಾ ಅಭಿಮಾನ ಇರಬೇಕು. ಅವಕ್ಕೆ ಧಕ್ಕೆ ಉಂಟಾದಾಗ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಜೊತೆಗೆ ಶೋಷಿತರ ಪರವಾಗಿ ನಿಲ್ಲುವ ಸಂಘಟನೆ ಆಗಬೇಕಿದೆ” ಎಂದು ಹೇಳಿದರು.
ನಂತರ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ದೀಪ ಬೆಳಗಿಸಿ ಘಟಕವನ್ನು ಉದ್ಘಾಟಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕ ರಣಧೀರರ ವೇದಿಕೆಯು ಕೇವಲ ಹೋರಾಟಗಳಿಗೆ ಸೀಮಿತವಾಗಿಲ್ಲ. ಈ ಸಂಘಟನೆ ನಾಡಿನ ನೆಲ, ಜಲ, ಭಾಷೆಯ ಅಸ್ಮಿತೆಯನ್ನು ಕಾಪಾಡುವ ಧ್ವನಿಯಾಗಿದೆ. ಕನ್ನಡಿಗನೇ ಕರ್ನಾಟಕದಲ್ಲಿ ಸಾರ್ವಭೌಮ, ಕರ್ನಾಟಕದಲ್ಲಿ ಕನ್ನಡಿಗನಿಗೆ ಅನ್ಯಯವಾದರೆ ನಾವು ಸಹಿಸುವುದಿಲ್ಲ, ಸಂಘಟನೆಯಲ್ಲಿ ಶಕ್ತಿ ಇದ್ದರೆ ಎಲ್ಲವೂ ಸಾಧ್ಯ” ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಕರ್ನಾಟಕ ರಣಧೀರ ವೇದಿಕೆಯ ನೂತನ ಕುಮಟಾ ತಾಲೂಕು ಅಧ್ಯಕ್ಷರಾಗಿ ಸಮೀರ್ ಅಹಮದ್ ಮಹಮ್ಮದ್ ಗೌಸ ಹಾಗೂ ಭಟ್ಕಳದ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಶನಿಯಾರ ನಾಯ್ಕ ಅವರಿಗೆ ನೇಮಕಾತಿ ಮಾಡಿದ್ದೂ ಸದರಿಯವರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು.
ಇದರ ಜೊತೆಗೆ ಕುಮಟಾ ಹಾಗೂ ಭಟ್ಕಳ ತಾಲೂಕಿನ ಇತರ ಪದಾಧಿಕಾರಿಗಳಿಗೂ ನೇಮಕಾತಿ ಆದೇಶ ಹಾಗೂ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ಸೂರಜ್ ಪಾಂಡುರಂಗ ನಾಯ್ಕ ಮಾತನಾಡಿ “ಸಂಘಟನೆಯ ಪ್ರತಿಯೊಬ್ಬರೂ ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಜಿಲ್ಲಾಸಮಿತಿ ಹಾಗೂ ರಾಜ್ಯಾಧ್ಯಕ್ಷರು ಸದಾ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಮುಂದಿನ ದಿನಗಳಲ್ಲಿ ದಾಂಡೇಲಿ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನೆ ನಡೆಯಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪದಾಧಿಕಾರಿಗಳಾದ ಭೈರವ್, ಮೂರ್ತಿ, ಮಹೇಶ್ ಗೌಡ ಜಿ, ಪ್ರವೀಣ್ ಗೌಡ, ಶಿವರಾಜ್ ಗೌಡ ಹಾಗೂ ಲೋಕೇಶ್ ಎಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನ ತಂಡಕ್ಕೆ ಶುಭ ಹಾರೈಸಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ವಿಷ್ಣು ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಕಿರಣ ಚಂದ್ರಹಾಸ್ ಗಾಂವಕರ ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಸರ್ವ ಪದಾಧಿಕಾರಿಗಳ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಈ ಸಂದರ್ಭದಲ್ಲಿ ಕುಮಟಾ ಮತ್ತು ಭಟ್ಕಳದ ನೂತನ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC