ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘ ನಿ.(ವಿ ಎಸ್ ಎಸ್ ಎನ್) ನಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು 50ಕ್ಕೂ ಹೆಚ್ಚು ಮುಗ್ಧ ಬಡ ಜನರಿಗೆ ಸಹಕಾರ ಸಂಘದ ನಿಯಮ ಮೀರಿ ನಕಲಿ ನಿಶ್ಚಿತ ಠೇವಣಿ ಬಾಂಡ್ ವಿತರಿಸಿ ವಂಚನೆ ಮಾಡಿರುವ ಘಟನೆ ನಡೆದಿದೆ..
ಬೆಂಡೋಣೆ ವಿ ಎಸ್ ಎಸ್ ಎನ್ ವ್ಯಾಪ್ತಿಯಲ್ಲಿ ಸುಮಾರು ಅಂದಾಜು 70 ಲಕ್ಷ ರೂಪಾಯಿ ವಂಚನೆ ಆಗಿರುವುದು ಸಾಬೀತಾಗಿದ್ದು. ಸಹಕಾರ ಕ್ಷೇತ್ರಕ್ಕೆ ಕಪ್ಪುಮಸಿ ಬಳಿಯುವ ಹುನ್ನಾರ ನಡೆದಿದೆ ಎನ್ನಲಾಗಿದೆ. ತುಮಕೂರು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಇದೆ ಮೊದಲ ಬಾರಿಗೆ ಇಂತಹ ದೊಡ್ಡ ಮಟ್ಟದ ಹಣದ ಮಹಾ ವಂಚನೆ ನಡೆದುರುವುದು ಸಹಕಾರ ಕ್ಷೇತ್ರಕ್ಕೆ ಅವಮಾನ ತಂದಿದೆ.
ಬೆಂಡೋಣೆ ವಿ ಎಸ್ ಎಸ್ ಎನ್ ವ್ಯಾಪ್ತಿಯಲ್ಲಿನ ಗ್ರಾಮಿಣ ಭಾಗದ ಬಡ ಜನರಿಗೆ ಸಹಕಾರ ಸಂಘದ ನಿಯಮಗಳನ್ನು ಗಾಳಿಗೆ ತೂರಿ ಸುಮಾರು 50ಕ್ಕೂ ಹೆಚ್ಚು ನಕಲಿ ಠೇವಣಿ ಬಾಂಡ್ ವಿತರಣೆ ಮಾಡಲಾಗಿದೆ ಎನ್ನಲಾಗಿದೆ.
ಬೆಂಡೋಣೆ ವಿ ಎಸ್ ಎಸ್ ಎನ್ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಹೆಚ್ ಆರ್ ರಮೇಶ್ ಆಂಡ್ ಟೀಂ ನಿಂದ ನಕಲಿ ಠೇವಣಿ ಬಾಂಡ್ ವಿತರಣೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರಿಗೆ ಮಾತ್ರ ಅಸಲಿ ಠೇವಣಿ ಬಾಂಡ್ ವಿತರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮುಗ್ಧ ಜನರೇ ಈ ವಂಚಕರ ಟಾರ್ಗೆಟ್:
ಗ್ರಾಮೀಣ ಭಾಗದ ಮುಗ್ಧ ಮಹಿಳೆಯರು ಮತ್ತು ಬಡ ಕೂಲಿ ಕಾರ್ಮಿಕರು ತಮ್ಮ ಹೊಟ್ಟೆ– ಬಟ್ಟೆಯನ್ನು ಕಟ್ಟಿ ತಮ್ಮ ಕೂಲಿ ಹಣದಿಂದ ಬಂದ ಅಲ್ಪ–ಸ್ವಲ್ಪ ಕೂಡಿಟ್ಟ ಹಣವನ್ನು ವಿ ಎಸ್ ಎಸ್ ಎನ್ ನಲ್ಲಿ ಠೇವಣಿ ಇಟ್ಟಿದ್ದರು. ಸಹಕಾರ ಸಂಘದ ಮೇಲಾಧಿಕಾರಿಗಳ ಕಣ್ಣು ತಪ್ಪಿಸಿ ನಕಲಿ ನಿಶ್ಚಿತ ಠೇವಣಿ ಬಾಂಡ್ ಗಳನ್ನು ಜನರಿಗೆ ನೀಡಿ ಯಾಮಾರಿಸಿರುವ ಘಟನೆ ಬೆಂಡೋಣೆ ವಿ ಎಸ್ ಎಸ್ ಎನ್ ಆಡಳಿತ ಮಂಡಳಿ ಮಾಡಿದೆ.
ಮಾಜಿ ಕಾರ್ಯ ನಿರ್ವಹಣಾಧಿಕಾರಿ ಹೆಚ್ ಆರ್ ರಮೇಶ್ ಅಮಾನತ್ತು
ಬೆಂಡೋಣೆ ವಿ ಎಸ್ ಎಸ್ ಎನ್ ನಲ್ಲಿ ಅತಿ ಹೆಚ್ಚು ಹಣ ದುರುಪಯೋಗ ಸಾಭೀತು ಆದ ಬೆನ್ನಲ್ಲೇ ಮಾಜಿ ಸಹಕಾರ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ರಾಜಣ್ಣ ರವರ ಆದೇಶದ ಮೇರೆಗೆ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್ ಆರ್ ರಮೇಶ್ ರವನನ್ನು ಅಮಾನತ್ತು ಮಾಡಲಾಗಿದೆ.
ಸಾರ್ವಜನಿಕರ ಹಣ ದುರುಪಯೋಗ : ಆಸ್ತಿ ಮುಟ್ಟುಗೋಲು
ಮಾಜಿ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಆರ್.ರಮೇಶಗೆ ಸೇರಿದ ಆಸ್ತಿಗಳನ್ನ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅಕ್ರಮ ಹಣ ದುರುಪಯೋಗ ಮಾಡಿರುವುದು ಕಂಡು ಬಂದ ತಕ್ಷಣ ಆರೋಪಿಗೆ ಸೇರಿದ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಎಫ್ ಐಆರ್ ದಾಖಲಿಸುವಂತೆ ಒತ್ತಾಯ:
ಸಾರ್ವಜನಿಕರ ಮತ್ತು ಮುಗ್ಧ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ತಪ್ಪಿತಸ್ಥರ ಮೇಲೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸುವಂತೆ ಸಾರ್ವಜನಿಕರು ವಾರ್ಷಿಕ ಮಹಾಸಭೆಯಲ್ಲಿ ಒತ್ತಾಯಿಸಿದ್ದಾರೆ.
ಬೆಂಡೋಣೆ ವಿ ಎಸ್ ಎಸ್ ಎನ್ ನಲ್ಲಿ ನಿಶ್ಚಿತ ಠೇವಣಿ ಹಣ ಹೂಡಿಕೆ ಮಾಡಿದ್ದ ಜನರ ಹಣವನ್ನು ತಕ್ಷಣವೇ ಬಡ್ಡಿ ಸಮೇತ ವಾಪಸ್ ಕೊಡಿಸಿ ಕೊಡಿ ಎಂದು ವಾರ್ಷಿಕ ಮಹಾಸಭೆಯಲ್ಲಿ ಮೇಲ್ವಿಚಾರಕ ತಿಮ್ಮರಾಜುಗೆ ಗೇರಾವ್ ಹಾಕಿದ ಘಟನೆಯೂ ಸಹ ನಡೆದಿದೆ. ನಮಗೆ ಸೂಕ್ತ ನ್ಯಾಯ ಒದಗಿಸಿ ತಪ್ಪಿತಸ್ಥರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಹಕಾರ ಸಚಿವ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ರಾಜಣ್ಣರವರಲ್ಲಿ ಮೋಸಕ್ಕೆ ಒಳಗಾದ ಮಹಿಳೆಯರು ಮತ್ತು ಬಡ ಜನರು ಮಾದ್ಯಮದ ಮೂಲಕ ಮನವಿ ಮಾಡಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎನ್ ಆರ್ ಸಣ್ಣಪ್ಪಯ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/71/ಸಿಎಲ್ಎಂ/2016. ದಿನಾಂಕ : 06-12-2016 ರಲ್ಲಿ ಅಧಿಕಾರ ಚಲಾಯಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಬೆಂಡೋಣೆ ಯಲ್ಲಿ ಆಡಳಿತಾತ್ಮಕ ಹಾಗೂ ನಿಶ್ಚಿತ ಠೇವಣಿ ಬಾಂಡ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಕಲಂ 65 ರಡಿ ಪರಿವೀಕ್ಷಣೆ ನಡೆಸಿ ಈ ಆದೇಶದ ದಿನಾಂಕ ದಿಂದ 30 ದಿನದೊಳಗೆ ವರದಿ ಸಲ್ಲಿಸಲು ಕಲಂ 65ರ ಪರಿವೀಕ್ಷಣಾಧಿಕಾರಿಯಾಗಿ ವಿನಾಸ್ ಗುರುರಾಜು, ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ನೀಡಲಾಗಿದೆ.
ಸ್ವಾಮಿ.. ನಾನು ನನ್ನ ಮಗಳ ಮದುವೆಗೆಂದು ಕೂಲಿ–ನಾಲಿ ಮಾಡಿ ಸಂಪಾದಿಸಿದ ಎರಡು ಲಕ್ಷ ಹಣವನ್ನು ವಿ ಎಸ್ ಎಸ್ ಎನ್ ನಲ್ಲಿ ಠೇವಣಿ ಇಟ್ಟಿದ್ದೆ. ನಾನು ಮೂಲತಃ ಬಂಡೆ ಕಾರ್ಮಿಕ, ನನ್ನ ಕುಟುಂಬ ಈಗ ಬೀದಿಗೆ ಬಂದಿದೆ. ನನ್ನ ಹಣವು ಇಲ್ಲ ನನಗೆ ಸೇರಬೇಕಾದ ಠೇವಣಿ ಬಡ್ಡಿಯೂ ಇಲ್ಲ ನಾನು ಯಾರ ಬಳಿ ನ್ಯಾಯ ಕೇಳಬೇಕು. ನನಗೆ ನನ್ನ ಠೇವಣಿ ಹಣ ಬೇಕು. ನಕಲಿ ಠೇವಣಿ ಬಾಂಡ್ ನಮಗೆ ನೀಡಿ ನಮಗೆ ಮಹಾ ವಂಚನೆ ಮಾಡಿದ್ದಾರೆ. ಬ್ಯಾಂಕ್ ನ ಮೇಲಾಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ.
— ರಾಜಣ್ಣ. ಗೌಜಗಲ್ಲು ಗ್ರಾಮ, ಮೋಸಕ್ಕೆ ಒಳಗಾದ ಬಂಡೆ ಕಾರ್ಮಿಕ.
ನನ್ನ ಮೊಮ್ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ನಾನು ಐದು ಲಕ್ಷ ರೂಪಾಯಿಗಳನ್ನು ಇಲ್ಲಿ ಠೇವಣಿ ಇಟ್ಟಿದ್ದೆ. ನನಗೆ ನಕಲಿ ಠೇವಣಿ ಬಾಂಡ್ ನೀಡಿ ನನ್ನನು ವಂಚಿಸಿದ್ದಾರೆ. ವಿ ಎಸ್ ಎಸ್ ಎನ್ ನಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ರವರನ್ನು ನನ್ನ ಹಣ ಕೊಡಿ ಎಂದು ಕೇಳಿದರೆ ನನಗೆ ನೀವು ಯಾವುದೇ ಹಣವು ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ.ನನ್ನ ಕುಟುಂಬಕ್ಕೆ ಈಗ ನ್ಯಾಯ ಬೇಕಿದೆ ನನ್ನ ಮೊಮ್ಮಗಳನ್ನು ಬಿಎಸ್ಸಿ ಪದವಿ ಮಾಡಿಸಬೇಕು ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣರಲ್ಲಿ ಮನವಿ ಮಾಡುತ್ತಿದ್ದೇನೆ.
— ಸಿದ್ಧಲಿಂಗಮ್ಮ. ಮಲ್ಲೇಕಾವು ಗ್ರಾಮ. ನೊಂದ ರೈತ ಮಹಿಳೆ.
ವಿ ಎಸ್ ಎಸ್ ಎನ್ ನಲ್ಲಿ ನಕಲಿ ಠೇವಣಿ ಬಾಂಡ್ ನಿಂದ ಅನ್ಯಾಯಕ್ಕೆ ಒಳಗಾದ ಬಗ್ಗೆ ನಮ್ಮ ಗಮನಕ್ಕೆ ಬಂದಿರುತ್ತದೆ. ನಾವು ಮಾಹಿತಿ ತಿಳಿದ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು ಎಲ್ಲ ಠೇವಣಿದಾರರ ಹಣವನ್ನು ಶೀಘ್ರವೇ ವಾಪಸು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಾಜಿ ಕಾರ್ಯದರ್ಶಿ ಹೆಚ್.ಆರ್.ರಮೇಶ್ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದ ಮೊರೆ ಹೋಗಿ ಅವರಿಗೆ ಸೇರಿದ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಕಲಿ ಠೇವಣಿ ಬಾಂಡ್ ವಿತರಣೆ ಮಾಡಿದ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಶೀಘ್ರವೇ ತಪ್ಪಿತಸ್ಥರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ.
— ತಿಮ್ಮರಾಜು. ಮೇಲ್ವಿಚಾರಕರು, ಕೊರಟಗೆರೆ.
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಮುಗ್ಧ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC