ಸರಗೂರು: ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಎಸ್ ವಿವೈಎಂ ಸಂಸ್ಥೆ ಉತ್ತಮ ಅವಕಾಶ ಮಾಡಿದ್ದಾರೆ ಎಂದು ಜೆಎಸ್ಎಸ್ ವಿದ್ಯಾ ಸಂಸ್ಥೆಗಳ ಹಾಗೂ ಮೃತ್ಯುಂಜಯಪ್ಪ ಟ್ರಸ್ಟ್ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಹೇಳಿದರು.
ಪಟ್ಟಣದ ವಿವೇಕಾನಂದರ ಯೂತ್ ಮೂವ್ ಮೆಂಟ್ ಆಸ್ಪತ್ರೆ ಆವರಣದಲ್ಲಿ ಶನಿವಾರದಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆ ಮತ್ತು ವರ್ತಕ ಮಂಡಳಿ ಸರಗೂರು ಲಯನ್ ಕ್ಲಬ್ ಆಫ್ ಸರಗೂರು, ನೋಟರಿ ಕ್ಲಬ್ ಎಚ್.ಡಿ.ಕೋಟೆ, ಜೈನ್ ಮಿಲನ್ ಸರಗೂರು, ರಾಜಸ್ಥಾನ ಸಂಘ, ಲಯನ್ಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಬೇಕು. ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಎಂದರು.
ಅಧುನಿಕ ಜೀವನಶೈಲಿ, ಆಹಾರ ಪದ್ಧತಿ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು, ಆಗಾಗ ನಿಯಮಿತ ರೋಗ ತಪಾಸಣೆಯಿಂದ ಆರೋಗ್ಯಮಯ ಜೀವನ ನಡೆಸಬೇಕು. ಗ್ರಾಮೀಣ ಭಾಗದಲ್ಲಿಈ ರೀತಿ ಶಿಬಿರವನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆ ಆಯೋಜಿಸಿರುವುದು ಅಭಿನಂದನರ್ಹ ಎಂದರು.
ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆದರೆ ಅರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಸುರಿಯುತ್ತೇವೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ. ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು.
ಐಪಿಎಸ್ ನಿವೃತ್ತಿ ಅಧಿಕಾರಿ ಚಮನ್ ಲಾಲ್ ಮಾತನಾಡಿ, ವೈದ್ಯಕೀಯ ಚಿಕಿತ್ಸೆ ಪಡೆಯುವುದರೊಂದಿಗೆ, ಸರ್ಕಾರ ಯೋಗ ಶಿಬಿರವನ್ನು ನಡೆಸುತ್ತಿದ್ದು ಅದರ ಪ್ರಯೋಜನ ಪಡೆಯಬಹುದು ಮತ್ತು ನಾವು ಆಹಾರವನ್ನು ಸೇವಿಸುವಾಗ ಜಾಗರೋಕತೆ ವಹಿಸಬೇಕು. ಆಹಾರ ಪದ್ಧತಿ ಕೂಡ ಬಹಳ ಮುಖ್ಯ. ಆರೋಗ್ಯ ಸುಧಾರಣೆಗೆ ಯೋಗ ಮಾಡಿ ದೇಹವನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಅನಾರೋಗ್ಯದಿಂದ ದೂರ ಇರಬಹುದು ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಆರೋಗ್ಯವಂತ ಮಹಿಳೆಯಿಂದ ಇಡೀ ಕುಟುಂಬ ಕ್ಷೇಮವಾಗಿರುತ್ತದೆ. ಮಹಿಳೆಯರು ಹೆಚ್ಚಾಗಿ ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಬೀಚನಹಳ್ಳಿ ಗ್ರಾಪಂ ಸದಸ್ಯ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ ಕಬಿನಿ ಮಾತನಾಡಿ, ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ವಿವಿಧ ಕಾರಣಗಳಿಗಾಗಿ ಮನುಷ್ಯ ತಂಬಾಕು ಸೇರಿದಂತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾನೆ. ಮಾದಕ ವಸ್ತುಗಳ ಸೇವನೆಯು ಕೇವಲ ಜೀವನ ನಷ್ಟವಲ್ಲದೇ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉಪ ಮುಖ್ಯ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಆಸ್ಪತ್ರೆ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ವ್ಯಸನಗಳಿಗೆ ಒಳಗಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಪೋಷಕರು ಈ ಬಗ್ಗೆ ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಸಂಸ್ಥೆ ಉಪ ನಿರ್ದೇಶಕರು ಡಾ.ಶಂಕರ್ ರವರು ಪ್ರಾಸ್ತಾವಿಕ ಭಾಷಣ ಮಾತನಾಡಿದರು. ಈ ಸಂದರ್ಭದಲ್ಲಿ ವರ್ತಕರ ಮಂಡಳಿ ಕಾರ್ಯದರ್ಶಿ ವೆಂಕಟೇಶ್, ಜೈನ್ ಮಿಲನ್ ನಿರ್ದೇಶಕ ಎಸ್ ಎಸ್ ಸೋಮಫ್ರಭ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿ. ಭಾಸ್ಕರ್, ರಾಜಸ್ಥಾನ್ ಸಂಘ ಅಧ್ಯಕ್ಷ ಡಕ್ಲರಾಮ್, ರೋಟರಿ ಕ್ಲಬ್ ಅಧ್ಯಕ್ಷ ಎನ್. ಧರ್ಮೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಬಿ.ನಾಗರಾಜು, ನೋಟರಿ ಕ್ಲಬ್ ಸತೀಶ್, ಆಸ್ಪತ್ರೆ ಉಪ ವ್ಯವಸ್ಥಾಪಕ ಬಿ.ಜಿ.ಸಂಧ್ಯಾ, ಸಂಸ್ಥೆಯ ಸಿಬ್ಬಂದಿಗಳು ಅಪ್ರೋಲ್ ಪಾಷಾ, ಎಂ.ಪಿ.ರಮೇಶ್, ಸುಧಾರಾಣಿ, ಮಮತಾ, ಶ್ರೀಕಾಂತ್, ಬಂಗಾರ ಶೆಟ್ಟಿ, ಗೋಪಾಲಕೃಷ್ಣ, ರೂಪೇಶ್, ವೆಂಕಟೇಶಸ್ವಾಮಿ, ಸತೀಶ್, ಡಾ.ಮನೋಹರ್, ಇನ್ನೂ ಮುಖಂಡರು ಸೇರಿದಂತೆ ಕಾರ್ಯಕರ್ತರು ಶಿಬಿರಕ್ಕೆ ಆಗಮಿಸಿದ ಮಹಿಳೆಯರು ಹಾಗೂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC