ತುಮಕೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ತುಮಕೂರು ದಸರಾ ಪ್ರಯುಕ್ತ ಆಯೋಜಿಸಿದ್ದ ‘ಪಂಜಿನ ಕವಾಯತು’ ದಸರಾದ ವೈಭವ ಹೆಚ್ಚಿಸಿತು. ಎನ್‌ಸಿಸಿ, ಎನ್‌ಎಸ್‌ಎಸ್, ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಾಹಸಕ್ಕೆ ಸಾವಿರಾರು ಜನ ಸಾಕ್ಷಿಯಾದರು. ನೂರಾರು ವಿದ್ಯಾರ್ಥಿಗಳು ಸಾಲಾಗಿ ನಿಂತು ಬೆಂಕಿಯ ಜತೆಗೆ ಆಟವಾಡುತ್ತಿದ್ದಂತೆ ಭಾಸವಾಯಿತು.
ನೂರಾರು ಬೆಂಕಿ ಪಂಜುಗಳನ್ನು ಬಳಸಿ ‘ತುಮಕೂರು’, ‘ದಸರಾ-2025’, ‘ಥ್ಯಾಂಕ್ಯೂ’, ‘ವೆಲ್ ಕಮ್ ಟು ಆಲ್’ ಎಂಬ ಇಂಗ್ಲಿಷ್ ಪದದ ಕಲಾಕೃತಿ ಅರಳಿಸಿದರು. ಬೆಂಕಿ ಹಿಡಿದು ಧೈರ್ಯದಿಂದ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿಗಳು ವೀಕ್ಷಕರಲ್ಲಿ ಬೆರಗು ಮೂಡಿಸಿದರು. ಜಿಲ್ಲೆಯ ಜನತೆಯ ಎದುರಿಗೆ ವಿಸ್ಮಯ ಲೋಕ ತೆರೆದಿಟ್ಟರು. ಇಡೀ ದಸರಾಗೆ ಮೆರುಗು ತಂದರು.
ಸಂಜೆ 7 ಗಂಟೆಗೆ ಸರಿಯಾಗಿ ಶುರುವಾದ ಕವಾಯತು ಸುಮಾರು 25 ನಿಮಿಷಗಳ ಕಾಲ ನಡೆಯಿತು. 256 ಜನರಲ್ಲಿ 160 ಮಂದಿ ವಿದ್ಯಾರ್ಥಿನಿಯರೇ ಇದ್ದರು. ಯಾವುದೇ ಅಳುಕಿಲ್ಲದೆ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸಾಹಸ ದೃಶ್ಯಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಎರಡು ತಿಂಗಳ ನಿರಂತರ ತಯಾರಿ ಫಲ ನೀಡಿತು. ವೀಕ್ಷಕರಿಂದ ಪಂಜಿನ ಕವಾಯತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕವಾಯತು ವೀಕ್ಷಣೆಗೆ ಆಗಮಿಸಲು ಸಾರ್ವಜನಿಕರಿಗೆ ಉಚಿತವಾಗಿ ಪಾಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಸಾವಿರಾರು ಜನ ಕ್ರೀಡಾಂಗಣದ ಕಡೆಗೆ ಹೆಜ್ಜೆ ಹಾಕಿದರು. ಇಡೀ ಕ್ರೀಡಾಂಗಣ ಜನರಿಂದ ತುಂಬಿತ್ತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರು ಕವಾಯತು ವೀಕ್ಷಿಸಿದರು. ಸ್ಥಳದ ಅಭಾವದಿಂದ ಹತ್ತಾರು ಜನ ಹೊರಗೆ ಉಳಿದಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಳೆದ ವರ್ಷದಿಂದ ಜಿಲ್ಲಾ ಆಡಳಿತದಿಂದ ದಸರಾ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೈಸೂರು ಮಾದರಿಯಲ್ಲಿ ಕವಾಯತು ನಡೆಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಕವಾಯತು ನಂತರ ಹಸಿರು ಸಿಡಿಮದ್ದು ಪ್ರದರ್ಶನ ನಡೆಯಿತು. ಗಾಯಕ ಕಂಬದ ರಂಗಯ್ಯ ಅವರಿಂದ ಗಾಯನ ಕಾರ್ಯಕ್ರಮ ನೆರವೇರಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC