ತುಮಕೂರು: ದಸರಾ ಹಬ್ಬ, ಆಯುಧ ಪೂಜೆ ಆಚರಣೆ ನಡುವೆಯೂ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.
ದಸರಾ ಹಬ್ಬದ ಸಮಯದಲ್ಲಿ ಹೂವಿನ ಧಾರಣೆ ಗಗನ ಮುಟ್ಟುತ್ತಿತ್ತು. ಆದರೆ ಈ ಬಾರಿ ಅಂತಹ ವಾತಾವರಣ ಕಂಡು ಬರುತ್ತಿಲ್ಲ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೋಮವಾರ ಎಂದಿನ ದರದಲ್ಲಿಯೇ ಹೂವು ಮಾರಾಟ ನಡೆಯಿತು. ಗುಲಾಬಿ ಕೆ.ಜಿ. 350ರಿಂದ 400 ಇತ್ತು. ಬಿಡಿ ಸೇವಂತಿಗೆ ಕೆ.ಜಿ 100–120, ಚೆಂಡು ಹೂವು ಕೆ.ಜಿ 400, ಮಲ್ಲಿಗೆ ಕೆ.ಜಿ 1 ಸಾವಿರ, ಕನಕಾಂಬರ ಕೆ.ಜಿ. 800ರಿಂದ 900ಕ್ಕೆ ಮಾರಾಟವಾಯಿತು.
ಕೆ.ಜಿ ಬೂದು ಕುಂಬಳಕಾಯಿ 20–30, ಜೋಡಿ ಬಾಳೆ ಕಂದು 30–40ಕ್ಕೆ ಸಿಗುತಿತ್ತು. ಸೋಮವಾರ ಸಂಜೆ ವೇಳೆಗೆ ಮಾರುಕಟ್ಟೆಯಲ್ಲಿ ಜನ ಸಂದಣಿ ಹೆಚ್ಚಿತ್ತು. ಮಂಗಳವಾರ ಮತ್ತಷ್ಟು ದಟ್ಟಣೆಯಾಗಲಿದೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಬೆಲೆ ಹೆಚ್ಚಾಗಬಹುದು ಎಂಬುದನ್ನು ಅರಿತವರು ಮುಂಚೆಯೇ ಅಗತ್ಯ ಸಾಮಗ್ರಿ ಖರೀದಿಸಿದರು.
ಕಳೆದ ವರ್ಷ ಹೆಚ್ಚಿನ ಮಳೆಯಾಗಿದ್ದರಿಂದ ಹೂವಿನ ಬೆಳೆಗೆ ಹಾನಿಯಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೈ ಸೇರಲಿಲ್ಲ. ಬೆಳೆಗಾರರು ನಷ್ಟ ಅನುಭವಿಸಿದರು. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಹೂವು ಲಭ್ಯವಿಲ್ಲದೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿತ್ತು. ಸೇವಂತಿಗೆ, ಮಲ್ಲಿಗೆ, ಕನಕಾಂಬರ ಬೆಲೆ ಗಗನ ಮುಟ್ಟಿತ್ತು. ಪ್ರತಿ ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗಿ ಗ್ರಾಹಕರ ಜೇಬು ಸುಡುತ್ತಿತ್ತು. ಈ ಬಾರಿ ಜಿಲ್ಲೆಯಲ್ಲಿ ಜೋರು ಮಳೆಯಾಗಿಲ್ಲ. ಸಾಧಾರಣ ಮಳೆಗೆ ಬೆಳೆ ಹಾನಿಯಾಗಿಲ್ಲ. ಇಳುವರಿ ಚೆನ್ನಾಗಿದ್ದು, ನಿರೀಕ್ಷೆಗೂ ಮೀರಿ ಹೂವು ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC