ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ನವರಾತ್ರಿ ಹಬ್ಬಕ್ಕೆ ಪ್ರಮುಖ ಆಕರ್ಷಣೆ ದಸರಾ ಬೊಂಬೆ, ಗ್ರಾಮೀಣ ಭಾಗದ ಜನರಲ್ಲಿ ಹಬ್ಬದ ವಾತವರಣ ನಿರ್ಮಾಣ ಮಾಡಲಾಗುತ್ತದೆ. ನವದುರ್ಗೆಯರನ್ನ 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಹೆಂಗಳೆಯರ ಪಾಲಿಗೆ ವಿಶೇಷ. ನವರಾತ್ರಿ ಹಬ್ಬಕ್ಕೆ ಮೆರುಗು ತಂದುಕೊಡುವುದು ಬೊಂಬೆಗಳ ಸಾಲು. ನವವಿಧದಲ್ಲಿ ನೆಡೆಯುವ ದೇವಿ ಆರಾಧನೆಯ ಜತೆಗೆ ಮನೆಮಂದಿಯೆಲ್ಲಾ ವಿಶೇಷವಾಗಿ ನವರಾತ್ರಿ ಹಬ್ಬದಲ್ಲಿ ಬೊಂಬೆಗಳನ್ನ ಜೋಡಿಸಿ ಬಂಧು ಬಳಗದವರನ್ನ ಆಹ್ವಾನಿಸಿ ಸಂಭ್ರಮಿಸುತ್ತಾರೆ.
ತಾಲೂಕಿನ ಹೊಳವನಹಳ್ಳಿಯ ನಿವೃತ್ತ ಮುಖ್ಯ ಶಿಕ್ಷಕ ದಿವಂಗತ ರಮಾನಂದ್ ಮತ್ತು ಅವರ ಪತ್ನಿ ನಾಗಮಣಿಯವರು ಮನೆಯಲ್ಲಿ ಪ್ರತಿವರ್ಷದಂತೆ ದಸರಾ ವೈಭವವನ್ನು ಸಾರುವ ಗೊಂಬೆಗಳನ್ನು ಸುಮಾರು 150 ವರ್ಷದಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಮನೆಯಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಗೊಂಬೆಗಳನ್ನ ಕೂರಿಸಿ ಮನೆಯ ಅಕ್ಕಪಕ್ಕದ ಮುತೈದೆಯರು ಹಾಗೂ ಮಕ್ಕಳನ್ನ ಕರೆದು ಪೂಜೆಯನ್ನ ಮಾಡುತ್ತಾರೆ.
ವಿಶೇಷ ಪೂಜೆ ಮತ್ತು ಭಜನೆ:
ನವರಾತ್ರಿಯ ಪ್ರಯುಕ್ತ ಮನೆಯಲ್ಲಿ 9 ದಿನಗಳು ಕಾಲ ಪ್ರತಿನಿತ್ಯ ಮುತ್ತೈದೆಯರು ಹಾಗೂ ಮಕ್ಕಳು ಮನೆಗೆ ಭೇಟಿ ನೀಡಿ ಭಜನೆ ಮತ್ತು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡು ನವರಾತ್ರಿಯ ದಿನಗಳನ್ನ ಸಂಭ್ರಮಿಸುತ್ತಾರೆ. ವಿಜಯದಶಮಿ ಹಬ್ಬದಂದು ಗೊಂಬೆಗಳ ತೆಗೆಯಲಿದ್ದು ನಿತ್ಯವೂ ಭಜನೆಯಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ರೀತಿಯ ಪ್ರಸಾದ ಮತ್ತು ಮುತ್ತೈದೆಯರಿಗೆ ಬಾಗಿನ ಕೊಡುವ ಪದ್ಧತಿಯನ್ನ ರೂಡಿಸಿಕೊಂಡು ಬರುತ್ತಿದ್ದಾರೆ.
50 ಬಗೆಯ ಗೊಂಬೆಗಳ ವೈಶಿಷ್ಟತೆ:
ದಸರಾ ಹಬ್ಬದ ಪ್ರಾರಂಭದ ದಿನವೇ ಮನೆಯಲ್ಲಿ ಕೂರಿಸುವ ಒಂದೊಂದು ಬೊಂಬೆಗಳು ಒಂದೊಂದು ರೀತಿಯ ವಿಶೇಷ ಇತಿಹಾಸದ ಕಥೆಗಳನ್ನು ಹೇಳುತ್ತವೆ. ನಮ್ಮ ಸಂಸ್ಕೃತಿ, ಧಾರ್ಮಿಕ ಪರಂಪರೆ, ಸಾಹಿತ್ಯ ಆಚರಣೆ, ವೈಚಾರಿಕತೆ, ವಿಜ್ಞಾನ, ಪೌರಾಣಿಕ ಕಥೆ, ಕೃಷಿ, ಚಂದ್ರಯಾನ–3, ಸನಾತನ ಧರ್ಮ ಹೀಗೆ ವಿಷಯ ಮತ್ತು ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಗೊಂಬೆಗಳನ್ನು ಸಿದ್ದತೆ ಮಾಡಲಾಗಿದೆ. ಅಲ್ಲದೇ ನಮ್ಮ ನಾಡಿನ ಸಂಸ್ಕೃತಿ ಮತ್ತು ಐತಿಹಾಸಿದ ಇತಿಹಾಸ ಸಾರುವ ಗೊಂಬೆಗಳಿಗೆ ಪ್ರಮುಖ ಸ್ಥಾನ ನೀಡಲಾಗಿದೆ.
ಹೆಣ್ಣು ಮಕ್ಕಳಿಗೆ ದಸರಾವೇ ವಿಶೇಷ:
ನವರಾತ್ರಿಯು ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಹಬ್ಬ. ಮಹಿಳೆಯರು 9 ದಿನವು 9 ರೀತಿಯ ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮಿಸುವ ವಿಶೇಷ ಹಬ್ಬ. ಪ್ರತಿದಿನ ಬನ್ನಿ ಮರ ಸೇರಿದಂತೆ ನಾನಾ ದೇವಾಸ್ಥಾನಗಳಿಗೆ ಬೆಳಗಿನ ಜಾವವೇ ತೆರಳಿ ಪೂಜೆ ಮಾಡುವುದೇ ವಿಶೇಷ. ಮನೆಗಳಲ್ಲಿ ಗೊಂಬೆಕೂರಿಸಿ ಸಿಂಗಾರ ಮಾಡಿ ಹಬ್ಬದ ಸಂಭ್ರಮ ಹೆಚ್ಚಿಸುತ್ತಾರೆ. ಗೃಹಿಣಿಯರು ತವರಿನಿಂದ ತಂದ ಗೊಂಬೆಗಳನ್ನು ಇಟ್ಟು ಪೂಜಿಸುವುದು ವಿಶೇಷವಾಗಿ ಕಾಣ ಸಲಿದೆ.
ದಸರಾ ವೈಭವದ ಚಿತ್ರಣ ಆಕರ್ಷಣೀಯ:
ವೈಭವಯುತ ದಸರಾವನ್ನು ಜಂಭೂಸವಾರಿ, ಕೀಲು ಕುದುರೆ, ಜಾನಪದ ಕಲಾ ತಂಡಗಳ ಮೆರವಣಿಗೆ ಸೇರಿದಂತೆ ಹಲವು ದಸರಾ ಹಬ್ಬದ ಪ್ರಾತ್ಯಕ್ಷಿಕೆಯನ್ನು ಚಿತ್ರಿಸಿದ್ದು, ಇವುಗಳನ್ನು ನೋಡಲು ಊರಿನ ಅಕ್ಕಪಕ್ಕದ ಗ್ರಾಮದವರು ತಂಡೋಪತಂಡವಾಗಿ ಬಂದು ವೈಭವನ ಬೊಂಬೆ ಪ್ರದರ್ಶವನ್ನು ನೋಡಿ ಆನಂದಿಸುತ್ತಿದ್ದಾರೆ.
1 ಸಾವಿರಕ್ಕೂ ಅಧಿಕ ಗೊಂಬೆಗಳ ಪ್ರದರ್ಶನ:
ರಾಮಾಯಣ, ಮಹಾಭಾರತ, ಬ್ರಹ್ಮೋತ್ಸವ, ಶ್ರೀನಿವಾಸ ಪದ್ಮಾವತಿ, ರೈತರ ದಿನಚರಿ, ರಾಮ ಪಟ್ಟಾಭಿಷೇಕ, ಸೀತಾರಾಮ ಕಲ್ಯಾಣ, ಕುಂಬಕರಣ, ಕಲ್ಯಾಣೋತ್ಸವ, ಶ್ರೀಸರಸ್ಪತಿ, ಶ್ರೀರಾಮ ಆಂಜನೇಯ ಗುಹೆ, ಶ್ರೀಅಷ್ಟಲಕ್ಷ್ಮಿ, ಮದುವೆ ಸಂಭ್ರಮ, ಘಟೋದ್ಗಜ, ನೃತ್ಯ ಪ್ರದರ್ಶನ, ಉಲಗ ಅಳಂದ ಪೆರುಮಾಳ್, ಶ್ರೀಕೃಷ್ಣಲೀಲೆ, ನಮ್ಮೂರಶಾಲೆ, ಗಣಪತಿ, ಚಂದ್ರಯಾನ–3 ಬಿಂಬಿಸುವ 1 ಸಾವಿರಕ್ಕೂ ಅಧಿಕ ಗೊಂಬೆಗಳ ಮುಖ್ಯಶಿಕ್ಷಕ ಲೇ.ರಮಾನಂದ ಅವರ ಮನೆಯಲ್ಲಿ ಅನಾವರಣಗೊಂಡಿವೆ.
ನವರಾತ್ರಿ ಪ್ರಯುಕ್ತ ಗೊಂಬೆಗಳ ಪ್ರದರ್ಶನ ಪಾಡ್ಯಮಿಯಲ್ಲಿ ಪ್ರಾರಂಭವಾಗಿ ವಿಜಯದಶಮಿಗೆ ಮುಕ್ತಾಯ ಆಗಲಿದೆ. 9 ದಿನಗಳ ಕಾಲ ವಿಶೇಷಪೂಜೆ ಮತ್ತು ಭಜನೆ ಕಾರ್ಯಕ್ರಮ ಜರುಗಲಿದೆ. 1 ಸಾವಿರಕ್ಕೂ ಅಧಿಕ ಗೊಂಬೆಗಳ ರಕ್ಷಣೆ ಮತ್ತು ನಿರ್ವಹಣೆಯೇ ನಮಗೇ ದೊಡ್ಡ ಸವಾಲು. ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯು ಗೊಂಬೆಗಳ ಮೂಲಕ ಅನಾವರಣೆ ಗೊಂಡಿವೆ. ಸುಮಾರು 150 ವರ್ಷಳಿಂದ ದಸರಾ ಹಬ್ಬಕ್ಕೆ ಗೊಂಬೆಗಳನ್ನ ಕೂರಿಸಲಾಗುತ್ತಿದೆ.
— ನಾಗಮಣಿ, ಗೃಹಿಣಿ, ಹೊಳವನಹಳ್ಳಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC