ವೈ.ಎನ್.ಹೊಸಕೋಟೆ: ಯಲ್ಲಪ್ಪನಾಯಕನ ಹೊಸಕೋಟೆ ಸಂಸ್ಥಾನದ ನಿರ್ಮಾತೃ ಪಾಳೇಗಾರ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಗುರುವಾರದ ವಿಜಯದಶಮಿಯಂದು ಎಂದಿನಂತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು.
ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊಂಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ ವಿಜಯದಶಮಿಯಂದು ಸಂಜೆ 3 ಗಂಟೆ ಸಮಯದಲ್ಲಿ ಅಶ್ವಾರೂಢರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು.
ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿಂದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ತುಮ್ಮಲುಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ, ಕೊಲ್ಲಾಪುರದಮ್ಮ, ರಾಮದೇವರು, ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು.
ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು ಜನತೆ ಸಂಮೃದ್ದಿಯಿಂದ ಇರಲಿ ಎಂದು ಎಂದಿನಂತೆ ಪ್ರಾರ್ಥನೆ ಮಾಡಿದರು. ಅಲ್ಲಿಂದ ಮುಂದೆ ರಾಜ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿತು. ಜಾತಿಮತ ಬೇದಗಳಿಲ್ಲದೆ ಎಲ್ಲರೊಡಗೂಡಿ ಬರುತ್ತಿದ್ದ ಅಶ್ವಾರೂಡ ರಾಜಾ ಜಯಚಂದ್ರರಾಜುರವರು ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ ರಾಜರ ಮನೆ ಸೇರುವುದರೊಂದಿಗೆ ಮುಕ್ತಾಯಗೊಂಡಿತು.
ಈ ಜಂಬೂಸವಾರಿ ಸಂಪ್ರದಾಯವು ಸಂಸ್ಥಾನ ಪ್ರಾರಂಭದೊಂದಿಗೆ ತಳಕು ಹಾಕಿಕೊಂಡಿದ್ದು, ತಲೆ ತಲಾಂತರದಿಂದ ಸಾಗಿಬರುತ್ತಿದ್ದು ಮೈಸೂರಿನ ಜಂಬೂಸವಾರಿಯಷ್ಟೇ ವೈಶಿಷ್ಟ್ಯತೆಯನ್ನು ಪಡೆದಿದೆ. ಶಮಿವೃಕ್ಷದ ಪೂಜೆಯ ನಂತರ ಎಲ್ಲಾ ಸಾರ್ವಜನಿಕರು ಶಮೀ ಪತ್ರೆಯನ್ನು ಪಡೆದು ಪರಸ್ಪರ ಹಂಚಿಕೊಳ್ಳುತ್ತಾ, ಬಾಳು ಬಂಗಾರವಾಗಲಿ, ನಮ್ಮ ನಿಮ್ಮ ನಡುವಿನ ವಿಶ್ವಾಸ ಶಾಶ್ವತವಾಗಿರಲಿ ಎಂದು ಶುಭ ಹಾರೈಕೆ ಮಾಡಿಕೊಂಡರು.
ಬೆಸ್ಕಾಂ ಕಛೇರಿಯಲ್ಲಿರುವ ವರಸಿದ್ದಿ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹತ್ತಿ ಮತ್ತು ಹಣ್ಣಿನ ಅಲಂಕಾರಗಳನ್ನು ಮಾಡಲಾಗಿತ್ತು. ಬನ್ನಿ ಮಂಟಪಕ್ಕೆ ಬಂದ ಜನತೆ ವಿನಾಯಕನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC