ಸರಗೂರು: ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಒಂದೇ ಸೂರಿನಡಿ 32 ಇಲಾಖೆಗಳು ಬರುವಂತೆ ‘ಪ್ರಜಾಸೌಧ’ ಕಟ್ಟಡ ವಿನ್ಯಾಸಗೊಳಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಶಾಸಕರು, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 8.60 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ‘ಪ್ರಜಾಸೌಧ’ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರು ಸತತ ಪರಿಶ್ರಮದಿಂದಾಗಿ ಹೋಬಳಿ ಕೇಂದ್ರವಾಗಿದ್ದ ಸರಗೂರು, ಕೋಟೆ ತಾಲೂಕಿನಿಂದ ಬೇರ್ಪಟ್ಟು ನೂತನ ತಾಲೂಕಾಗಿ ಘೋಷಣೆಯಾಗಿ 8 ವರ್ಷ ಕಳೆದಿದೆ. ಸದ್ಯ ನೀರಾವರಿ ಇಲಾಖೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿಕೊಂಡು ಸಿಎಂ ಸಿದ್ದರಾಮಯ್ಯ ಅವರಿಂದ ಅನುದಾನ ಬಿಡುಗಡೆ ಮಾಡಿಸಿ ‘ಪ್ರಜಾಸೌಧ’ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ 32 ಇಲಾಖೆಗಳೂ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು.
ಆಸ್ಪತ್ರೆ, ಕೋರ್ಟ್, ಅಗ್ನಿಶಾಮಕ ಠಾಣೆ: ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದಾಗ ಪದವಿ ಕಾಲೇಜು ಮಂಜೂರಾಯಿತು. ಕಾಂಗ್ರೆಸ್ ಸರಕಾರದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ, 32 ಕೋಟಿ ರೂ.ವೆಚ್ಚದಲ್ಲಿ 100 ಹಾಸಿಗೆಯುಳ್ಳ ದೊಡ್ಡಾಸ್ಪತ್ರೆ, ನೀರಾವರಿ ಇಲಾಖೆಯ ಜಾಗದಲ್ಲಿಯೇ ನ್ಯಾಯಾಲಯ, 2 ಎಕರೆ ಜಾಗದಲ್ಲಿ ಜಾಗದಲ್ಲಿ ಅಗ್ನಿಶಾಮಕದಳ ಕಟ್ಟಡ ನಿರ್ಮಾಣಕ್ಕೆ 4 ಕೋಟಿ ರೂ.ಅನುದಾನ ಬಂದಿದೆ. ಹಂತ–ಹಂತವಾಗಿ ಇಲಾಖೆಗಳ ಕಟ್ಟಡಗಳ ನಿರ್ಮಿಸಲಾಗುವುದು. ಹಳ್ಳಿಗಳಿಂದ ಕೂಡಿದ ಸರಗೂರು ತಾಲೂಕಿನ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರವೇಶಾತಿ ಕೊರತೆ: ಪಟ್ಟಣದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ಪ್ರವೇಶಾತಿ ಕೊರತೆ ಇದ್ದು, ಮುಚ್ಚುವ ಭೀತಿಯಲ್ಲಿದೆ. ಕಾಲೇಜು ಮುಚ್ಚುವುದು ಸುಲಭ. ಆದರೆ, ಮಂಜೂರು ಮಾಡಿಸಿಕೊಂಡು ಬರುವುದು ಬಹಳ ಕಷ್ಟ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಕಾಲೇಜಿಗೆ ಸೇರಿಸಬೇಕು. ಆ ಮೂಲಕ ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಬಿಡುಗಲು 3.20 ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಬಾಕಿ ಇರುವ ಸಾಗುವಳಿಯನ್ನು ಕೊಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರತಿ ವಾರ್ಡ್ ಗಳಿಗೆ ಪ್ರತ್ಯೇಕವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಒಂದನೇ ಮುಖ್ಯ ರಸ್ತೆಯಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. 2ನೇ ಮುಖ್ಯ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಹ್ಯಾಂಡ್ ಪೋಸ್ಟ್–ಸರಗೂರು ಡಬಲ್ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೂ ಮುಂದಾಗಲಾಗುವುದು ಎಂದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಒಂದೇ ಸೂರಿನಡಿ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಲು ಕಟ್ಟಡ ನಿರ್ಮಾಣ ಮಾಡಬೇಕು. ಆದಷ್ಟು ಬೇಗ ಮುಗಿಸಿ ಇಲಾಖೆಗೆ ಹಸ್ತಾಂತರಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಮಾತನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಚಲುವಕೃಷ್ಣ, ರಾಧಿಕಾ, ವಿನಯ್, ನವೀನ್, ರಮೇಶ್, ಸ್ವಾಮಿ, ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಶಂಭುಲಿಂಗನಾಯಕ, ಅಣ್ಣಯ್ಯಸ್ವಾಮಿ, ಕುರುಬ ಸಮಾಜದ ಅಧ್ಯಕ್ಷ ಎಂ.ಬಿ.ಆನಂದ್, ಚಿಕ್ಕವೀರನಾಯಕ, ಕಂದೇಗಾಲ ಶಿವರಾಜು, ನವೀನ್ ಮಸಹಳ್ಳಿ, ಮನುಗನಹಳ್ಳಿ ಗುರುಸ್ವಾಮಿ, ಸಿದ್ದರಾಜು, ವೇಣುಗೋಪಾಲ್, ಚಿನ್ನಸ್ವಾಮಿ ದಡದಹಳ್ಳಿ, ಕುಂದೂರು ಮೂರ್ತಿ, ಮೈಸೂರು ಚಂದ್ರು, ರುದ್ರಯ್ಯ , ಸಣ್ಣಸ್ವಾಮಿ, ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್, ಸುದರ್ಶನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC