ಮೈಸೂರಿನ ವಿಜ್ಞಾನ ಶಿಕ್ಷಕರಾದ ಶ್ರೀ ಮಲ್ಲೇಶ್ ರವರಿಗೆ ಮೊದಲು ನನ್ನ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.
ಕೊನೆಯಲ್ಲಿ ಶಿಕ್ಷಕರು ಓಲ್ಟರ್ ಕೇಳಿದ್ದ ಒಂದು ಪ್ರಶ್ನೆಯನ್ನು ಉಲ್ಲೇಖಿಸಿರುತ್ತೀರಿ. ಬಹಳ ಸಂತೋಷವಾಯಿತು. ವಿಜ್ಞಾನ ಆಸಕ್ತರಿಗೆ ಇಂತಹ ವಿಷಯಗಳು ಮತ್ತಷ್ಟು ತಿಳಿಯುವ ಅಥವಾ ತಿಳಿದಿದ್ದನ್ನು ತಿಳಿಸುವ ಉತ್ಸುಕತೆ ಉಂಟಾಗುತ್ತದೆ. ಈಗ ವಿಚಾರಕ್ಕೆ ಬರುವುದಾದರೆ, ರಾತ್ರಿಯ ಆಕಾಶದಲ್ಲಿ ಹಲವಾರು ಕೋಟಿ ನಕ್ಷತ್ರಗಳು ಎಲ್ಲ ದಿಕ್ಕಿನಲ್ಲಿ ಇದ್ದರೂ, ಅವುಗಳಿಂದ ನಿರಂತರ ಬೆಳಕು ಬರುತ್ತಿದ್ದರೂ ಕೂಡ ಆಗಸದ ಬಣ್ಣ ಮಾತ್ರ ಕಪ್ಪು ಏಕೆ? ಈ ಪ್ರಶ್ನೆಗೆ ನನಗೆ ತಿಳಿದಿರುವ ಅತ್ಯಂತ ಸಮಾಧಾನಕರ ಉತ್ತರ ತಿಳಿಸಲು ಬಯಸುತ್ತೇನೆ.
ಇದನ್ನು ತಿಳಿಯುವ ಮೊದಲು, ಈ ಸಂದರ್ಭದಲ್ಲಿ ನಾನು ಬಹಳ ಹಿಂದೆ ನಕ್ಷತ್ರಗಳ ‘ಟ್ರಯಾಂಗಲ್ ಥಿಯರಿ’ (ನಕ್ಷತ್ರಗಳ ತ್ರಿಕೋನ ಸಿದ್ಧಾಂತ) ಬಗ್ಗೆ ಒಂದು ಸಣ್ಣ ಚಿತ್ರಸಹಿತ ಲೇಖನ ಬರೆದಿದ್ದೆ. ಅದು ಬಾಲವಿಜ್ಞಾನ ಎಂಬ ಮಾಸ ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾಗಿತ್ತು. ಆ ಸಿದ್ಧಾಂತವನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಕ್ಷಮೆ ಇರಲಿ ಈ ಸಿದ್ಧಾಂತದ ಬಗ್ಗೆ ಬಹುಶಃ ಶಿಕ್ಷಕರಿಗೆ ಈ ಮೊದಲೇ ತಿಳಿದಿರಬಹುದು ಎಂದು ಭಾವಿಸುತ್ತೇನೆ. ಈ ಸಿದ್ಧಾಂತದ ಪ್ರಕಾರ ನಮ್ಮ ಭೂಮಿಯಿಂದ ನೂರಾರು / ಸಾವಿರಾರು ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಹಲವಾರು ನಕ್ಷತ್ರಗಳ ಸ್ಥಾನ ನಾವು ನೋಡುತ್ತಿರುವ ದಿಕ್ಕಿನಲ್ಲಿ ಇರುವುದಿಲ್ಲ, ಅವು ಹಾಗೆ ಕಾಣಿಸುತ್ತಿರುತ್ತವೆ ಅಷ್ಟೇ, ಆದರೆ ಅವು ನಮ್ಮ ಬರಿಯ ಕಣ್ಣಿಗಾಗಲೀ, ಶಕ್ತಿಯುತ ಟೆಲಿಸ್ಕೋಪ್ ಆಗಲೀ ಅಥವಾ ನಮ್ಮ ವೈಜ್ಞಾನಿಕ ಸ್ಯಾಟಲೈಟ್ ಗಾಗಲೀ ಅವು ಕಾಣಿಸುತ್ತಿರುವ ದಿಕ್ಕಿನಲ್ಲಿ ಇರುವುದಿಲ್ಲ. ಹಲವಾರು ನಕ್ಷತ್ರಗಳು ನಮಗೆ ನೇರವಾಗಿಯೇ ಕಾಣಿಸುತ್ತಿರುತ್ತವೆ ಇದೂ ಕೂಡ ಸತ್ಯ. ಆದರೆ ಹಲವು ನಕ್ಷತ್ರಗಳು ಅವುಗಳ ಮಿನುಗುವ ಚಂಚಲತೆ ಹೇಳುವ ವಿಚಾರವೇ ಬೇರೆ ಇದರ ಬಗ್ಗೆ ನಂತರ ಹೇಳುತ್ತೇನೆ, ಹಾಗೆಯೇ ಸಮೀಪದ ನಕ್ಷತ್ರದ ಗುರುತ್ವದ ಪ್ರಭಾವದಿಂದ ಮತ್ತೊಂದು ಪಕ್ಕದ ನಕ್ಷತ್ರದ ಚಲನೆಯಲ್ಲಿನ ಏರಿಳಿತ ಮತ್ತು ಆ ನಕ್ಷತ್ರದ ಬೆಳಕಿನ ವಕ್ರೀಭವನ ಇವುಗಳನ್ನು ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.
ಈಗ ಪ್ರಮುಖ ವಿಚಾರಕ್ಕೆ ಬರುವುದಾದರೆ, ಒಂದು ಉದಾಹರಣೆ ಮೂಲಕ ತಿಳಿಯಬಹುದು. ನಮ್ಮ ಭೂಮಿಗೆ ನೂರಾರು / ಸಾವಿರಾರು ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಒಂದು ಅತ್ಯಂತ ಪ್ರಖರ ದೊಡ್ಡ ನಕ್ಷತ್ರ ಹಿಂದೆ ಮತ್ತೊಂದು ನಕ್ಷತ್ರ ಇದೆ ಎಂದು ಭಾವಿಸೋಣ ಅಂದರೆ ಕೋನದ ಪ್ರಕಾರ ಹೇಳುವುದಾದರೆ ನಮ್ಮ ಭೂಮಿಯಿಂದ 180 ಡಿಗ್ರಿ ಆಯಿತು, ಇದರ ಪ್ರಕಾರ ದೊಡ್ಡ ನಕ್ಷತ್ರವು ನಮಗೆ ನೇರವಾಗಿ ಕಾಣಿಸುತ್ತಿರುತ್ತದೆ, ಆದರೆ ಅದರ ಹಿಂದೆ ಇರುವ ನಕ್ಷತ್ರವು ನಮಗೆ ಕಾಣಿಸುವುದಿಲ್ಲ ಅಲ್ಲವೇ, ಈ ಹಿಂದೆ ಇರುವ ನಕ್ಷತ್ರವು ಹೊರ ಹೊಮ್ಮುವ ಬೆಳಕು ದೊಡ್ಡ ನಕ್ಷತ್ರದ ಸಮೀಪ ಹಾದು ಹೋಗುವಾಗ ಆ ದೊಡ್ಡ ನಕ್ಷತ್ರವು ತನ್ನ ಗುರುತ್ವದ ಪ್ರಭಾವದಿಂದ ವಕ್ರೀಭವಿಸಿ ಆ ಬೆಳಕು ನಮ್ಮ ಭೂಮಿಯನ್ನು ತಲುಪುವಂತಿದ್ದರೆ, ಆ ದೊಡ್ಡ ನಕ್ಷತ್ರ ಹಿಂದಿರುವ ನಕ್ಷತ್ರವೂ ಕೂಡ ನಮಗೆ ಈ ವಕ್ರೀಭವನದ ವಿದ್ಯಮಾನದಿಂದ ಮುಖಾಂತರ ಗೋಚರಿಸುತ್ತಿರುತ್ತದೆ. ಅಂದರೆ ನಾನು ಆಗಲೇ ಹೇಳಿದಂತೆ ಹಲವು ನಕ್ಷತ್ರಗಳ ಸ್ಥಾನ ನಾವು ನೋಡುತ್ತಿರುವ ದಿಕ್ಕಿನಲ್ಲಿ ಇರುವುದಿಲ್ಲ, ಇಂತಹ ವಿದ್ಯಮಾನಗಳು ನಕ್ಷತ್ರದ ಬೆಳಕಿನ ಚಂಚಲತೆ ಮತ್ತು ಗುರುತ್ವದಲ್ಲಿನ ಆ ಎರಡು ಕಾಯಗಳ ಚಲನೆಯಲ್ಲಿನ ಸೂಕ್ಷ್ಮ ವ್ಯತ್ಯಾಸದಿಂದ ಕಂಡುಹಿಡಿಯುತ್ತಾರೆ. ಹೀಗೆ ಸಾವಿರಾರು ಗ್ಯಾಲಾಕ್ಸಿಗಳ ಕೋಟ್ಯಂತರ ನಕ್ಷತ್ರಗಳಿಂದ ಹೊರ ಹೊಮ್ಮುವ ಬೆಳಕು ತಮ್ಮ ತಮ್ಮ ಸಮೀಪವಿರುವ ದೊಡ್ಡ ದೊಡ್ಡ ನಕ್ಷತ್ರಗಳ ಸಮೀಪ ಹಾದುಹೋಗುವಾಗ ಹಲವಾರು ಬಾರಿ ವಕ್ರೀಭವಿಸಿ ನಮ್ಮ ಭೂಮಿಯನ್ನು ತಲುಪುವ ಹೊತ್ತಿಗೆ ಬೆಳಕಿನ ಕಿರಣ ಅತ್ಯಂತ ಕ್ಷೀಣವಾಗಿರುತ್ತದೆ. ಹಾಗೆಯೇ ಶಿಕ್ಷಕರು ಹೇಳಿರುವ ಹಾಗೆ ಗೆಲಾಕ್ಸಿಯಲ್ಲಿನ ನಿಹಾರಿಕೆಗಳು, ಧೂಳಿನಕಣಗಳು, ಹೊಸ ಕಾಯದ ಉಗಮದ ಪೂರ್ವ ಮೋಡದಂತಹ ರಚನೆ ಇವೆಲ್ಲವೂ ಹತ್ತು ಹಲವು ಕೋಟಿ ಸಂಖ್ಯೆಯಲ್ಲಿ ಇರುತ್ತವೆ ಇವುಗಳು ತಮ್ಮ ಮೇಲೆ ಬಿದ್ದ ಬಹುತೇಕ ಬೆಳಕನ್ನು ಹೀರಿಕೊಂಡು ಸ್ವಲ್ಪವಷ್ಟೇ ಪ್ರತಿಫಲವಾಗಿರುವ ಸಾಧ್ಯತೆ ಇರುತ್ತದೆ. ಇಂತಹ ಬೆಳಕು ಸಾಗುವ ಹಾದಿಯಲ್ಲಿ ಮತ್ತೆ ಬೇರೆ ಬೇರೆ ಕಡೆ ಹಲವು ಬಾರಿ ಹೀರಿಕೆ, ಪ್ರತಿಫಲನದಂತಹ ಪ್ರಕ್ರಯೆಗೆ ಒಳಗಾಗುತ್ತವೆ, ಇಂತಹ ಪ್ರತಿಫಲಿತ ಕಿರಣಗಳಲು ಅತ್ಯಂತ ಕ್ಷೀಣವಾಗಿರುತ್ತವೆ, ಅದೆಷ್ಟೋ ಕಿರಣಗಳು ನಮ್ಮ ಭೂಮಿಯನ್ನು ತಲುಪುವುದೇ ಇಲ್ಲ.
ಹಾಗೆಯೇ ಇಂದು ನಾವು ನೋಡುತ್ತಿರವ ನಕ್ಷತ್ರ ಇಂದಿನ ದಿನದ್ದಲ್ಲ ಹಲವು ಜ್ಯೋತಿರ್ವಷಗಳಷ್ಟು ಹಿಂದಿನದ್ದು, ಅಂದು ಆ ನಕ್ಷತ್ರದಿಂದ ಹೊರಟ ಬೆಳಕು ಇಂದು ನಮ್ಮ ಭೂಮಿಯನ್ನು ತಲುಪುತ್ತಿರುವುದರಿಂದ ಇಂದು ನಮಗೆ ಕಾಣಿಸುತ್ತಿರುತ್ತದೆ, ಒಂದು ವೇಳೆ ಆ ನಕ್ಷತ್ರ ನಶಿಸಿದರೂ ಇನ್ನು ಹಲವು ಕೋಟಿ ವರ್ಷಗಳವರೆವಿಗೆ ನಮಗೆ ಗೋಚರಿಸುತ್ತಲೇ ಇರುತ್ತದೆ. ನಮ್ಮ ಸೂರ್ಯನಿಂದ ಹೊರಟ ಬೆಳಕು ನಮ್ಮ ಭೂಮಿಗೆ ತಲುಪಲು 8.3 ನಿಮಿಷಗಳ ಕಾಲಾವಕಾಶ ಬೇಕು, ಹಾಗೆಯೇ ಸೌರವ್ಯೂಹದ ಕಡೆಯ ಗ್ರಹ ನೆಪ್ಚೂನ್ ತಲುಪಲು 4 ಗಂಟೆ 10 ನಿಮಿಷದ ಕಾಲಾವಕಾಶ ಬೇಕು (ನಮ್ಮ ಭೂಮಿಯ ಸಮಯದಂತೆ), ಹಾಗಿದ್ದರೂ ನೆಪ್ಚೂನ್ ಗ್ರಹದಲ್ಲಿ ಹಗಲಿನ ತಾಪಮಾನ –330 ಡಿಗ್ರಿ ಫ್ಯಾರನ್ ಹೀಟ್ ಅಥವಾ -– 200 ಡಿಗ್ರಿ ಸೆಲ್ಷಿಯಸ್ (ನೆಪ್ಚೂನ್ ಒಂದು ಅನಿಲ ಗೋಳ ಕಾಯ) ನೆಪ್ಚೂನ್ ಗ್ರಹದಲ್ಲಿ ನಮ್ಮ ಸೂರ್ಯ ಹೇಗೆ ಕಾಣಿಸುತ್ತಾನೆ ಎಂದರೆ; ನಮಗೆ ನಮ್ಮ ಭೂಮಿಯ ಮೇಲೆ ರಾತ್ರಿಯ ಹೊತ್ತು ಗುರು ಗ್ರಹ ಹೇಗೆ ಕಾಣಿಸುವುದೋ ಹಾಗೆ ಹಗಲು ಹೊತ್ತಿನಲ್ಲಿ ಸೂರ್ಯ ಕಾಣಿಸುತ್ತಿರುತ್ತಾನೆ. ನಮ್ಮ ಸೌರವ್ಯೂಹದಲ್ಲೇ ಹೀಗಿರುವಾಗ ಇನ್ನು ಅದೆಷ್ಟೋ ಕೋಟಿ, ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರಗಳಿಂದ ಮೇಲೆ ತಿಳಿಸಿದ ಹಲವು ವಿದ್ಯಮಾನಗಳಿಗೆ ಒಳಗಾಗಿ ಬರುವ ಅತ್ಯಂತ ಕ್ಷೀಣ ಬೆಳಕು ನಮ್ಮ ರಾತ್ರಿಯ ಆಕಾಶ ಹೇಗೆ ತಾನೆ ಪ್ರಖರವಾಗಿ ಬೆಳಗಲು ಸಾಧ್ಯ?

ಸಂಪಾದಕರ ನುಡಿ
ಪ್ರಿಯ ಓದುಗರೇ,
ಈ ಸಂಚಿಕೆಯಲ್ಲಿ “ನಕ್ಷತ್ರಗಳ ಬೆಳಕಿದ್ದರೂ ರಾತ್ರಿ ಆಕಾಶ ಕಪ್ಪಾಗಿ ಕಾಣುವುದೇಕೆ?” ಎಂಬ ಕುತೂಹಲಕರ ಹಾಗೂ ಚಿಂತನೆಗೆ ದಾರಿ ತೆರೆದಿಡುವ ಪ್ರಶ್ನೆಯ ಆಳವಾದ ವಿವರಣೆ ನಿಮಗಾಗಿ ಪ್ರಕಟವಾಗಿದೆ. ವಿಜ್ಞಾನವನ್ನು ಕೇವಲ ಪಾಠಪುಸ್ತಕದ ಮಿತಿಗಳೊಳಗೆ ಸೀಮಿತಗೊಳಿಸದೆ, ಅದನ್ನು ನಮ್ಮ ದೈನಂದಿನ ಅನುಭವಗಳೊಂದಿಗೆ ಸಂಧಾನ ಮಾಡುವುದೇ ಇದರ ವಿಶೇಷತೆ.
ವೇಣುಗೋಪಾಲ್ ಅವರು ತಮ್ಮ ವೈಜ್ಞಾನಿಕ ಮನೋಭಾವವನ್ನು ಹಂಚಿಕೊಂಡಿದ್ದು, ಓದುಗರಲ್ಲಿ ಇನ್ನಷ್ಟು ಪ್ರಶ್ನೆಗಳ ಹುಟ್ಟುಮಾಡಲು, ಹೊಸ ಜ್ಞಾನಕ್ಕಾಗಿ ಹುಡುಕಾಟ ಪ್ರೇರೇಪಿಸಲು ಸಹಕಾರಿಯಾಗಿದೆ. “ಟ್ರಯಾಂಗಲ್ ಥಿಯರಿ” ಯ ನೆನಪು, ನಕ್ಷತ್ರಗಳ ವಕ್ರೀಭವನದ ಕಲ್ಪನೆ ಹಾಗೂ ಆಕಾಶದ ಕತ್ತಲೆಯ ವೈಜ್ಞಾನಿಕ ಕಾರಣಗಳನ್ನು ಅವರು ವಿವರಿಸಿರುವುದು ಓದುಗರಲ್ಲಿ ಬಾಹ್ಯಾಕಾಶದ ಅರಿವನ್ನು ಮತ್ತಷ್ಟು ಗಾಢಗೊಳಿಸುತ್ತದೆ.
ವಿಜ್ಞಾನವು ನಿಶ್ಚಿತ ಉತ್ತರವಲ್ಲ, ಅದು ನಿರಂತರ ಪ್ರಶ್ನೆಗಳ ಸರಮಾಲೆ. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ ಅದಕ್ಕೆ ಉತ್ತಮ ಉದಾಹರಣೆ. ಇಂತಹ ಲೇಖನಗಳು ಕಿರಿಯರಲ್ಲಿಯೂ ಹಿರಿಯರಲ್ಲಿಯೂ ಒಂದೇ ಸಮಾನ ಕುತೂಹಲವನ್ನು ಉಂಟುಮಾಡಿ ವಿಜ್ಞಾನಪ್ರೇಮವನ್ನು ಬೆಳೆಸಲಿ ಎಂಬುದು ನಮ್ಮ ಆಶಯ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC