ತುಮಕೂರು(ನಮ್ಮ ತುಮಕೂರು): ರಾಜ್ಯ ಸರ್ಕಾರ ಬಡ ಜನರ ವಿರೋಧಿ ನೀತಿ ಕೈಬಿಡಿ ಎಂದು ಒತ್ತಾಯಿಸಿ, ಅವೈಜ್ಞಾನಿಕ ಬಿಪಿಎಲ್ ಪಡಿತರ ಕಾರ್ಡ್ ರದ್ಧತಿಯನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ, ತುಮಕೂರು ಜಿಲ್ಲಾ ಹೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು.
ಸರ್ಕಾರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ವೈಜ್ಞಾನಿಕವಾಗಿ ರದ್ದುಗೊಳಿಸಿರುವುದು ಸಂಪೂರ್ಣ ಜನವಿರೋಧಿ ಕ್ರಮವಾಗಿದ್ದು, ಕೂಲಿಕಾರ್ಮಿಕರು ಹಾಗೂ ಬಡ ಕುಟುಂಬಗಳು ಇದರ ಬಲಿಯಾಗಿದ್ದಾರೆ ಎಂದು ಸಮಿತಿಯ ಮುಖಂಡರು ಆರೋಪಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳ ಪರವಾಗಿ ಆಹಾರ ಇಲಾಖೆಯ ಅಧಿಕಾರಿ ನಾಗರಾಜ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಜ್ಯೋತಿ, ಶಕ್ತಿ, ಯೂನಿಟ್ ಹಾಗೂ ಅನ್ನಭಾಗ್ಯ ಯೋಜನೆಗಳು ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕ್ರಮಗಳು ಮುಂದುವರಿದಿವೆ ಎಂದು ಹೇಳಿದರು.
ಆದರೆ ಇದನ್ನು ಒಪ್ಪದ ಪ್ರತಿಭಟನಾಕಾರರು ಸರ್ಕಾರ ನುಡಿದಂತೆ ಕಾರ್ಯಗತಗೊಳಿಸಿಲ್ಲ, ಅನೇಕ ಬಡ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ನೀಡಿರುವುದರಿಂದ ನಿಜವಾದ ಬಡವರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಎಂಟು ವರ್ಷಗಳ ಹಿಂದೆ ರಾಜ್ಯದಾದ್ಯಂತ ಸುಮಾರು 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದು ಬಡ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ಬಡವರ ಮನೆ ಮನೆ ಪರಿಶೀಲನೆ ನಡೆಸಿ ನಿಜವಾದ ಅರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಬಿಪಿಎಲ್ ಕಾರ್ಡ್ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC