ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲಸೌಕರ್ಯ ಕೊರತೆ ಮತ್ತು ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಸೋರುತ್ತಿರುವ ಕೊಠಡಿಯಲ್ಲಿ ಪಾಠ ಕೇಳುವ ದುಸ್ಥಿತಿ ಎದುರಾಗಿದೆ.
ತಾಲ್ಲೂಕಿನ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಲೆಂಬ ಉದ್ದೇಶದಿಂದ 1997ರಲ್ಲಿ ಈ ಕಾಲೇಜಿನ ನೂತನ ಕಟ್ಟಡ ನಿರ್ಮಾಣವಾಗಿತ್ತು. ಆದರೆ, ಕಾಲಾಂತರದಲ್ಲಿ ಕಟ್ಟಡದ ಮೇಲ್ಬಾವಣಿ ಬಿರುಕು ಬಿಟ್ಟಿದೆ.
ಮಳೆಗಾಲದಲ್ಲಿ ಗೋಡೆಗಳಿಂದ ನೀರು ಜಿನುಗುತ್ತದೆ ಮತ್ತು ಬೇಸಿಗೆಯಲ್ಲಿ ಮಣ್ಣು ಉದುರುತ್ತದೆ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ತೊಂದರೆಯಾಗುತ್ತಿದೆಯೆಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಕಾಲೇಜಿನ ಕಟ್ಟಡಕ್ಕೆ ಸುಣ್ಣ ಮತ್ತು ಬಣ್ಣ ಬಳಿದು ಎಷ್ಟೋ ವರ್ಷಗಳಾಗಿವೆ. ಕಿಟಕಿಗಳ ಗಾಜುಗಳು ಹಾಳಾಗಿ, ಮಳೆ ನೀರು ಒಳ ಹೋಗುತ್ತಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 22 ಕೊಠಡಿಗಳಿವೆ. ಅವುಗಳಲ್ಲಿ 9 ಕೊಠಡಿಗಳು ಬಳಕೆಗೆ ಅನುಪಯುಕ್ತವಾಗಿವೆ. ಕಾಲೇಜಿನಲ್ಲಿ ಮೂರು ಶೌಚಾಲಯಗಳಿವೆ. ಒಂದನ್ನು ಉಪನ್ಯಾಸಕರು ಮತ್ತು ಸಿಬ್ಬಂದಿ ಬಳಸುತ್ತಿದ್ದಾರೆ. ವಿದ್ಯಾರ್ಥಿ–ವಿದ್ಯಾರ್ಥಿನಿಯರ ಶೌಚಾಲಯಗಳು ಸಂಪೂರ್ಣವಾಗಿ ಹಾಳಾಗಿ, ನಿರ್ವಹಣೆಯಿಲ್ಲದೆ ಬಳಕೆ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ. ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೊರಗಡೆ ಅಲೆದಾಡಬೇಕಾದ ಪರಿಸ್ಥಿತಿ ಇಲ್ಲಿಯದು.
ಕಳೆದ ವರ್ಷ ಕಾಲೇಜಿಗೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಂಜೂರಾಗಿದೆ. ಆದರೆ, ಎರಡು ವರ್ಷಗಳ ನಂತರವೂ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಇಲ್ಲದೆ, 86 ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆ ಕಂಪ್ಯೂಟರ್ ಲ್ಯಾಬ್‌ಗೆ ತೆರಳಬೇಕಾಗುತ್ತಿದೆ.
ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ಒಟ್ಟು 23 ಹುದ್ದೆಗಳು ಮಂಜೂರಾಗಿವೆ. ಆದರೆ, 10 ಹುದ್ದೆಗಳು ಖಾಲಿ ಇವೆ. ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ಕನ್ನಡ ವಿಷಯಗಳಿಗೆ ಕಾಯಂ ಉಪನ್ಯಾಸಕರು ಇಲ್ಲದೆ, ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾಭ್ಯಾಸ ನಡೆಸಲಾಗುತ್ತಿದೆ. ಸಂಬಂಧಪಟ್ಟವರು ಇನ್ನಾದರೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಾರಾ? ಎಂದು ಕಾದು ನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC